ಬೆಳ್ತಂಗಡಿ, ಅ 6: ಮದ್ಯಪಾನ ಮಾಡಿದ ಪೋಷಕರಿಂದ ನಿರಂತರ ದೌರ್ಜನ್ಯಕ್ಕೊಳಗಾಗಿ ನೆರೆಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ ಬಾಲಕನೋರ್ವನನ್ನು ಮಂಗಳೂರು ಚೈಲ್ಡ್ ಲೈನ್ ಸಂಸ್ಥೆಯವರು ರಕ್ಷಿಸಿ ಬೊಂದೆಲ್ ಬಾಲವಿಕಾಸ ಕೇಂದ್ರಕ್ಕೆ ದಾಖಲಿಸಿಕೊಂಡ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿ ಸಂತ್ರಸ್ತ ಬಾಲಕನಾಗಿದ್ದು ತಂದೆ, ತಾಯಿ ಪ್ರತಿನಿತ್ಯ ಮದ್ಯಪಾನ ಮಾಡಿ ಬಾಲಕನಿಗೆ ಶಾಲೆಗೆ ಹೋಗುವುದು ಬೇಡ, ಕೆಲಸ ಮಾಡಿ ಹಣ ಸಂಪಾದಿಸಿಕೊಡು ಎಂದು ಒತ್ತಡ ಹಾಕುತ್ತಿದ್ದರು.
ಅಲ್ಲದೆ, ವಿಪರೀತ ಹಲ್ಲೆಯನ್ನೂ ಮಾಡುತ್ತಿದ್ದರು ಎನ್ನಲಾಗಿದೆ. ಎರಡು ತಿಂಗಳು ಮಾತ್ರ ಶಾಲೆಗೆ ಹೋಗಿದ್ದ ಬಾಲಕ ಪೋಷಕರ ಒತ್ತಡದಿಂದಾಗಿ ಮುಂದಿನ ದಿನಗಳಲ್ಲಿ ಶಾಲೆಗೆ ಹೋಗದೆ ಮನೆಯಲ್ಲಿ ಇರಬೇಕಾಯಿತು. ಆದರೆ ಬಾಲಕ ಶಾಲೆಗೆ ಹೋಗುವ ಇಚ್ಛೆ ವ್ಯಕ್ತಪಡಿಸುತ್ತಿದ್ದ. ಈ ನಡುವೆ ಬಾಲಕನ ಸ್ಥಿತಿಯನ್ನು ಅರ್ಥೈಸಿದ ನೆರೆಮನೆಯವರು ಕಳೆದ ಒಂದು ತಿಂಗಳಿನಿಂದ ಬಾಲಕನಿಗೆ ಆಶ್ರಯ ನೀಡಿದ್ದರು. ಬಳಿಕ ನೆರೆಕರೆಯವರಿಂದ ಮಾಹಿತಿ ಪಡೆದುಕೊಂಡು ಚೈಲ್ಡ್ಲೈನ್ ಕೇಂದ್ರಕ್ಕೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ತೆರಳಿದ ಸಿಬ್ಬಂದಿಗಳು ಬಾಲಕನ ಒಪ್ಪಿಗೆ ಮೇರೆಗೆ ಮಂಗಳೂರು ಬೋಂದೆಲ್ನಲ್ಲಿರುವ ಬಾಲ ಮಂದಿರಕ್ಕೆ ಬಾಲಕನನ್ನು ಸೇರಿಸಿದ್ದಾರೆ. ತಂದೆ ಕುಡಿದು ವಿಪರೀತ ಹಲ್ಲೆ ನಡೆಸುವ ಕಾರಣ ಮರಳಿ ಮನೆಗೆ ತೆರಳಲು ಬಾಲಕ ನಿರಾಕರಿಸಿದ್ದಾನೆ. ಹಾಗೂ ಶಿಕ್ಷಣ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದಾನೆ.