ಕಾರ್ಕಳ, ಅ 6: ತಾಲೂಕಿನ ಮುಂಡ್ಕೂರು ಪರಿಸರದ ಮನೆಗಳಲ್ಲಿ ನಡೆದಿರುವ ಕಳವು ಪ್ರಕರಣವನ್ನು ಭೇದಿಸಿದ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದ ಪೊಲೀಸರ ತಂಡ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. 2017ರಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದ ನಿವಾಸಿ ಜಯ ಎನ್ ಶೆಟ್ಟಿ, ಜ್ಯೋತಿ ಎನ್ ಶೆಟ್ಟಿ ಹಾಗೂ 2018ರಲ್ಲಿ ಮುಂಡ್ಕೂರು ಗ್ರಾಮದ ರಮೇಶ್ ಶೆಟ್ಟಿ ಎಂಬುವರ ಮನೆಯಿಂದ ಚಿನ್ನಾಭರಣಗಳ ಕಳವು ಕೃತ್ಯ ನಡೆದಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿಯವರು ಅಪರಾಧ ಪತ್ತೆ ತಂಡದೊಂದಿಗೆ ತನಿಖೆ ಕೈಗೊಂಡಿದ್ದು, ಖಚಿತ ವರ್ತಮಾನದ ಮೇರೆಗೆ ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಸ್ ನಿಲ್ದಾಣದ ಬಳಿ ಆರೋಪಿ ಶೈಲೇಶ್ ಶೆಟ್ಟಿ(35) ಎಂಬಾತನನ್ನು ಬಂಧಿಸಿದ್ದು, ಈ ವೇಳೆ ಪ್ರಕರಣದ ಮಾಹಿತಿ ಬೆಳಕಿಗೆ ಬಂದಿದೆ. ಕೃತ್ಯ ಎಸಗಿದ ಆರೋಪಿ ಚಿನ್ನಾಭರಣಗಳನ್ನು ಸಚ್ಚರಿಪೇಟೆ ಹಾಗೂ ಕಿನ್ನಿಗೋಳಿಯಲ್ಲಿರುವ ರಾಷ್ಟ್ರೀಯ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ಅಡವಿಟ್ಟು ಒಂದಿಷ್ಟು ಅಭರಣವನ್ನು ತನ್ನ ಮನೆಯಲ್ಲಿ ಬಚ್ಚಿರಿಸಿಕೊಂಡಿದ್ದನು. 6 ಲಕ್ಷ ಮೌಲ್ಯದ ಸುಮಾರು 210 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಸ್ವಾಧೀನ ಪಡಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಕೃತ್ಯಗಳ ಬಗ್ಗೆ ಪೊಲೀಸರಲ್ಲಿ ತಪ್ಪೊಪ್ಪೊಕೊಂಡಿದ್ದು, ಇನ್ನಷ್ಟು ಕೃತ್ಯಗಳಲ್ಲಿ ತಾನು ಭಾಗಿಯಾಗಿರುವುದಾಗಿ ಮಾಹಿತಿ ನೀಡಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣಾ ಪಿ.ಎಸ್.ಐ ವಾಸಪ್ಪ ನಾಯ್ಕ್, ಹೆಡ್ ಕಾನ್ಸ್ಟೇಬಲ್ಗಳಾದ ರಾಜೇಶ್ ಬೇಕಲ್, ಪ್ರಶಾಂತ್, ಗಿರೀಶ್, ಸತೀಶ್ ಬಟ್ವಾಡಿ, ಮತ್ತಿತರರು ಕಾರ್ಯಾಚರಣೇಯಲ್ಲಿ ಭಾಗವಹಿಸಿದ್ದರು.