ಬೆಳ್ತಂಗಡಿ, ಅ 6: ತಾಲೂಕಿನ ಗಂಡಿಬಾಗಿಲಿನ ಯುವತಿಯರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯವನ್ನು ಖಂಡಿಸಿ ಸೋಮವಾರ ಅಣಿಯೂರಿನಲ್ಲಿ ನಡೆದ ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಧಾರ್ಮಿಕ ಚಿಂತಕ ಕುಂಟಾರು ರವೀಶ ತಂತ್ರಿ “ಹಿಂದೂ ಸಮಾಜ ಯಾವತ್ತೂ ಕಾನೂನಿಗೆ ಗೌರವ ಕೊಡುತ್ತಾ ಬಂದಿದೆ. ಆದರೆ ಕಾನೂನಿನಲ್ಲಿ ನಮಗೆ ನ್ಯಾಯ ಸಿಗದೇ ಇದ್ದರೆ ಸುಮ್ಮನೆ ಕೂರುವುದಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯು ಕಾನೂನು ಮೀರಿ ವರ್ತಿಸುವವರನ್ನು ಜೈಲಿಗಟ್ಟುವ ಕಾರ್ಯ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಭಾರತ ದೇಶದಲ್ಲಿ ಸ್ತ್ರೀಯರಿಗೆ ಮಾತೃ ಸ್ಥಾನವನ್ನು ನೀಡುತ್ತಿದ್ದು, ಅದಕ್ಕಾಗಿ ಯಾವುದೇ ಧರ್ಮದವರಾಗಲಿ ಭಾರತದ ನೆಲವನ್ನು ನಮಸ್ಕರಿಸಬೇಕು. ಆದರೆ ಇಂದು ಅಂತಹ ಸ್ಥಾನಮಾನ ಇರುವ ಭಾರತದಲ್ಲಿ ಹಿಂದೂ ಸಮಾಜದ ಮೇಲೆ ಅದರಲ್ಲಿಯೂ ಮಹಿಳೆಯರ ಮೇಲೆ ಅತ್ಯಾಚಾರ, ದಬ್ಬಾಳಿಕೆಗಳು ನಡೆಯುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂ ಸಮಾಜಕ್ಕೆ ಅನ್ಯಾಯವಾದರೆ ಹಿಂದೂ ಸಂಘಟನೆಗಳಿಂದ ಬೃಹತ್ ಹೋರಾಟ ನಡೆಸಲಾಗುವುದು” ಎಂದರು.
ಈ ಸಂದರ್ಭ ಮಾತೃಶಕ್ತಿ ಪ್ರಮುಖ್ ಶಾಂಭವಿ ರೈ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಕೊರಗಪ್ಪ ಗೌಡ ಬಯಲು, ದೇವಕಿ ಬಾಂದಡ್ಕ, ಶಾಂತಪ್ಪ ಎನ್.ಕೆ.ಆಲಂಗಾಯಿ ಮೊದಲಾದವರು ಉಪಸ್ಥಿತರಿದ್ದರು.