ಬೆಂಗಳೂರು, ಆ 06 : ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳು ರಾಜ್ಯಬಾರ ಮಾಡುತ್ತಿದ್ದು, ರಾಜ್ಯದ ಜನರು, ಸಮರ್ಪಕ, ಉತ್ತಮ ಆಡಳಿತಕ್ಕಾಗಿ ಕಾಯುವಂತಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದೆ.
ರಾಜ್ಯದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಎಚ್ ಡಿ ಕುಮಾರಸ್ವಾಮಿ ಅವರು ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಎಚ್ ಡಿ ರೇವಣ್ಣ ರಾಜ್ಯದ ಸೂಪರ್ ಸಿಎಂ ಆಗಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸುಪ್ರೀಂ ಸಿಎಂ ಆಗಿದ್ದಾರೆ ಎಂದು ಟೀಕಿಸಿದೆ. ಈ ಹಿನ್ನೆಲೆಯಲ್ಲಿ ಮೂವರು ಮುಖ್ಯಮಂತ್ರಿಗಳಿಂದಾಗಿ ಜನರು ಸಮರ್ಪಕ ಆಡಳಿತಕ್ಕಾಗಿ ಕಾಯುತ್ತಿದ್ದಾರೆ. ಆದ್ದರಿಂದ ನಿಜವಾಗಿಯೂ ರಾಜ್ಯದ ಮುಖ್ಯಮಂತ್ರಿ ಯಾರು ಎಂಬುದನ್ನು ಎಚ್.ಡಿ.ದೇವೇಗೌಡರ ಕುಟುಂಬ ಮೊದಲು ನಿರ್ಧರಿಸಲಿ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ನಲ್ಲಿ ಹೇಳಿದೆ.