ಬೆಂಗಳೂರು, ಆ 6: ಕೇಂದ್ರ ಸರಕಾರದ ಮೋಟಾರ್ ವಾಹನ ತಿದ್ದುಪಡಿ ಮಸೂದೆ - 2017ನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ, ಆ. 7 ರಂದು ರಾಷ್ಟ್ರ ವ್ಯಾಪ್ತಿ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಕರ್ನಾಟಕ ಹಾಗೂ ಕೇರಳದಲ್ಲೂ ಬೆಂಬಲ ವ್ಯಕ್ತವಾಗಿದೆ.ಕೇರಳದಲ್ಲಿ ಖಾಸಗಿ, ಕೆ ಎಸ್ ಆರ್ ಟಿ . ಸಿ ಸೇರಿದಂತೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಲಾರಿ , ಆಟೋ - ಟ್ಯಾಕ್ಸಿ ಮಾಲಕರು ಮುಷ್ಕರ ದಲ್ಲಿ ಪಾಲ್ಗೊಳ್ಳಲಿದ್ದು , ಇದರಿಂದ ದೈನಂದಿನ ಚಟುವಟಿಕೆ ಸ್ಥಬ್ಧಗೊಳ್ಳಲಿದೆ. 24 ಗಂಟೆಗಳ ಮುಷ್ಕರ ಇಂದು ಮಧ್ಯರಾತ್ರಿಯಿಂದ ಆರಂಭಗೊಳ್ಳಲಿದ್ದು , ಬಿಜೆಪಿ ಯ ಕಾರ್ಮಿಕ ಸಂಘಟನೆಯಾದ ಬಿ ಎಂ ಎಸ್ ಹೊರತುಪಡಿಸಿ ಉಳಿದ ಎಲ್ಲಾ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಕೇಂದ್ರ ಸರಕಾರ ಮೋಟಾರು ಕಾಯ್ದೆ ಯಲ್ಲಿನ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು , ಇನ್ಸೂರೆನ್ಸ್ ಪ್ರೀಮಿಯಂ ಹೆಚ್ಚಳ ಹಿಂದಕ್ಕೆ ಪಡೆಯಬೇಕು , ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ.
ಇನ್ನು ಬೆಂಗಳೂರಿನಲ್ಲೂ ಸಂಪೂರ್ಣ ಬಂದ್ ನಡೆಸಲು ತೀರ್ಮಾನಿಸಲಾಗಿದ್ದು, ನಗರದ ಟೌನ್ ಹಾಲ್ನಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ. ಮೋಟಾರ್ ವಾಹನ ತಿದ್ದುಪಡಿ ಮಸೂದೆ ಚಾಲಕರ ಮತ್ತು ಜನ ವಿರೋಧಿ ಮಸೂದೆಯಾಗಿದೆ. ಈ ಮಸೂದೆ ಜಾರಿಯಾದರೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದಿಲ್ಲ. ಬದಲಿಗೆ ಕೇಂದ್ರಿಕರಿಸುವ ಕೆಲಸ ನಡೆಯುತ್ತಿದೆ ಎನ್ನುವುದು ಮಾಲೀಕರ ವಾದವಾಗಿದೆ. ಈ ಮುಷ್ಕರಕ್ಕೆ ಕೆ ಎಸ್ ಆರ್ ಟಿ ಸಿ ನೌಕರರ ಫೆಡರೇಶನ್, ಒಟಿಯು ಚಾಲಕರು ಮತ್ತು ಮಾಲೀಕರ ಸಂಘ, ಎಆರ್ ಡಿ ಯು ಸಂಘ, ಏರ್ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘ, ಪೀಸ್ ಆಟೋ , ಕೆ ಎಸ್ ಆರ್ ಟಿಸಿ ಎಸ್ ಸಿ/ ಎಸ್ ಟಿ ನೌಕರರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಒಗ್ಗೂಡಿವೆ.