ಮಂಜೇಶ್ವರ,ಆ 07 : ಉಪ್ಪಳದ ಸೋಂಕಾಲ್ ವಿನ ಬಳಿ ಸಿಪಿಎಂ ಕಾರ್ಯಕರ್ತ ಅಬೂಬಕ್ಕರ್ ಸಿದ್ದಿಕ್ ಯ ಬರ್ಬರ ಹತ್ಯೆ ಪ್ರಕರಣವನ್ನು ಖಂಡಿಸಿ ಆ 6 ರ ಸೋಮವಾರ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ತನಕ ಮಂಜೇಶ್ವರ ತಾಲೂಕಿನಲ್ಲಿ ಹರತಾಳಕ್ಕೆ ಕರೆ ನೀಡಿದ್ದರೂ ಬೆಳಕಿನಿಂದಲೇ ಅಘೋಷಿತ ಹರತಾಳ ವಾತಾವರಣ ಕಂಡುಬರುತ್ತಿದೆ. ಬಹುತೇಕ ಕಡೆಗಳಲ್ಲಿ ಬಸ್ಸು- ವಾಹನ ಸಂಚಾರ ಸ್ಥಗಿತಗೊಂಡಿದೆ. ಉಪ್ಪಳ ಕುಕ್ಕಾರು ಎಂಬಲ್ಲಿ ಖಾಸಗಿ ಬಸ್ಸು ಮತ್ತು ಕುಂಬಳೆ ಶಿರಿಯದಲ್ಲಿ ಕರ್ನಾಟಕ ಕೆ ಎಸ್ ಆರ್ ಟಿ ಸಿ ಬಸ್ಸಿನ ಮೇಲೆ ಕಲ್ಲೆಸೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಉಪ್ಪಳ ಪೇಟೆಯಲ್ಲಿ ಗುಂಪೊಂದು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲೆತ್ನಿಸಿದ್ದು, ಪೊಲೀಸರು ಮತ್ತು ಗುಂಪಿನ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು .
ವಿಶೇಷ ತನಿಖಾ ತಂಡ ರಚನೆ : ಎಸ್ .ಪಿ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಡಿವೈಎಸ್ ಪಿ ವಿ.ಸುಕುಮಾರನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ. ಶ್ರೀನಿವಾಸ್ ತಿಳಿಸಿದ್ದಾರೆ . ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 20 ಮಂದಿಯ ತನಿಖಾ ತಂಡ ರಚನೆಯಾಗಿದ್ದೂ. ಕರಾವಳಿ ಪೊಲೀಸ್ ಪಡೆಯ ಸರ್ಕಲ್ ಇನ್ಸ್ ಪೆಕ್ಟರ್ ಸಿಬಿ ಥೋಮಸ್ ಮತ್ತು ಕುಂಬಳೆ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಪ್ರೇಮ್ ಸದನ್ ಈ ತಂಡಲ್ಲಿದ್ದಾರೆ . ಇನ್ನು ಮಂಜೇಶ್ವರದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ .ಹಂತಕರ ಪತ್ತೆಗೆ ತನಿಖಾ ತಂಡ ಹುಡುಕಾಟ ನಡೆಸುತ್ತಿದೆ .
ರಾಜಕೀಯ ದ್ವೇಷದ ಆಯಾಮದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಡಾ. ಶ್ರೀನಿವಾಸ್ ತಿಳಿಸಿದ್ದಾರೆ .