ಶಿರ್ವ, ಆ 06: ಸೌದಿ ಅರೇಬಿಯಾದ ಅಲ್ ಮಿಕ್ವಾ ಸರಕಾರಿ ಆಸ್ಪತ್ರೆಯಲ್ಲಿ ಜು.19 ರಂದು ಶಿರ್ವ ಮೂಲದ ನರ್ಸ್ ಹೆಝಲ್ ನಿಗೂಢವಾಗಿ ಸಾವನಪ್ಪಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸೌದಿ ಪ್ರಜೆಯೊಬ್ಬನ ಕಿರುಕುಳ ತಾಳಲಾರದೆ ನರ್ಸ್ ಕ್ವಾಟರ್ಸ್ ನಲ್ಲಿರುವ ಅವರ ಕೊಠಡಿಯ ಹೊರಗಿದ್ದ ರಾಡ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೌದಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಪೊಲೀಸರು, ತನಿಖೆ ಚುರುಕುಗೊಳಿಸಿದ್ದು, ಸಾಕ್ಷ್ಯಾಧಾರಗಳ ಕಲೆ ಹಾಕಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಸೌದಿಯ ಆಡಳಿತ ಕುಟುಂಬದ ಮೂಲಗಳಿಗೆ ಯಾವುದೇ ಮಾಹಿತಿ ನೀಡಿಲ್ಲ.
ನರ್ಸ್ ಆತ್ಮಹತ್ಯೆಗೂ ಮುನ್ನ ಕೊಂಕಣಿ ಮತ್ತು ಇಂಗ್ಲೀಷ್ ನಲ್ಲಿ ಬರೆದಿಟ್ಟ ಡೆತ್ ನೋಟ್ ನಲ್ಲಿ ಸೌದಿ ಪ್ರಜೆ ತನಗೆ ಕಿರುಕುಳ ನೀಡಿದ್ದನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಕೊಂಕಣಿಯಲ್ಲಿದ್ದ ಪತ್ರವನ್ನು ಇಂಗ್ಲೀಷ್ ಹಾಗೂ ಅರೇಬಿಕ್ ಭಾಷೆಗೆ ತರ್ಜುಮೆ ಮಾಡಲಾಗಿದ್ದು, ಇದನ್ನು ಪೊಲೀಸರು ಪರಿಶೀಲಿಸಿದ ಬಳಿಕ ಸೌದಿ ಪೊಲೀಸರು ಅವುಗಳನ್ನು ಸೀಲ್ಡ್ ಲಕೋಟೆಯಲ್ಲಿರಿಸಿದ್ದಾರೆ. ಅದರ ಆಧಾರದ ಮೇಲೆ ಇನ್ನಿತರ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧಾರವಾಗಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಪ್ರಕರಣಕ್ಕೆ ಮಹತ್ತರ ತಿರುವು ಲಭಿಸಿರುವುದರಿಂದ ಪೊಲೀಸರ ತನಿಖೆ ಪೂರ್ಣವಾಗಿ ಬಳಿಕ ನ್ಯಾಯಾಲಯದಲ್ಲಿ ಸಂಪೂರ್ಣ ವಿಚಾರಣೆ ನಡೆದು ತೀರ್ಪು ಬರುವವರೆಗೂ ಮೃತದೇಹ ಭಾರತಕ್ಕೆ ರವಾನಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.