ಬಂಟ್ವಾಳ, ಅ 1: ಇಲ್ಲಿನ ನೇತ್ರಾವತಿ ನದಿಯ ತಟಗಳಲ್ಲಿ ಅನಾಥವಾಗಿ ಕವುಚಿ ಮಲಗಿರುವ ಮರಳುಗಾರಿಕಾ ದೋಣಿಗಳು, ಕೆಲಸಗಾರರಿಲ್ಲದೆ ಅನಾಥವಾಗಿರುವ ಗುಡಿಸಲುಗಳು, ಮರಳು ಇಲ್ಲದೆ ಅರ್ದಕ್ಕೆ ನಿಂತಿರುವ ಮನೆಗಳು, ಮರಳುಗಾರಿಕೆ ಯಾವಾಗ ಆರಂಭವಾಗುತ್ತದೆ ಎಂದು ಕಾದು ಕುಳಿತಿರುವ ಕೆಲಸಗಾರರು ಇದು ದ.ಕ.ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಸಿಕ್ಕಾಗ ಕಂಡು ಬರುತ್ತಿರುವ ಚಿತ್ರಣಗಳು.
ಜಿಲ್ಲಾಡಳಿತ ಮತ್ತು ಗಣಿ ಇಲಾಖೆಯ ಜಂಟಿಯಾಗಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯ ನಿರ್ದೇಶನದಂತೆ ದ.ಕ.ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸದ್ಯಕ್ಕೆ ಕಡಿವಾಣ ಹಾಕಿದಂತಾಗಿದೆ. ಪಾಕೃತಿಕ ಸಂಪತ್ತಾದ ಮರಳು ಒಂದು ಕಾಲದಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಯಾವುದೇ ದಲ್ಲಾಳಿಗಳಿಲ್ಲದೆ ನೇರವಾಗಿ ಕರಾವಳಿಯ ಜನರಿಗೆ ಸಿಗುತ್ತಿತ್ತು. ಬರಬರುತ್ತಾ ಕೇರಳ ಮತ್ತು ಹೊರಜಿಲ್ಲೆಗಳಿಗೆ ಯಾವಾಗ ಇಲ್ಲಿನ ನೇತ್ರಾವತಿಯ ಮರಳು ರಫ್ತಾಗಲು ಪ್ರಾರಂಭವಾಯಿತೋ ಅಲ್ಲಿಂದ ಶುರುವಾಯಿತು ಜಿಲ್ಲೆಯ ಜನರಿಗೆ ಮರಳಿನ ಅಭಾವ. ಕರಾವಳಿಯ ಜನರ ಮನೆಯ ಅಂಗಳದಲ್ಲಿ ಮರಳು ಸಾಕಷ್ಟಿದ್ದರೂ ಇಲ್ಲಿಯ ಜನರ ಉಪಯೋಗಕ್ಕೆ ಬಂಗಾರದ ಹಣ ನೀಡಿದರೂ ಮರಳು ಸಿಗುತ್ತಿಲ್ಲ ಅನ್ನುವ ಮಟ್ಟಿಗೆ "ಮರಳು ವ್ಯಾಪಾರ" ಕುದುರೆ ವ್ಯಾಪಾರವಾಗುತ್ತಾ ಹೋಯಿತು , ಇಲ್ಲಿಯ ಜನ ಅಕ್ರಮ ಮರಳುಗಾರಿಕೆಯ ಬಗ್ಗೆ ಧ್ವನಿಯೆತ್ತಲು ಶುರು ಮಾಡಿದರು. ಯಾವಾಗ ಅಕ್ರಮ ಮತ್ತು ಅನೀತಿಯ ರೂಪದಲ್ಲಿ ಮರಳುಗಾರಿಕೆಯ ವಹಿವಾಟು ಆರಂಭವಾಯಿತೋ ಅಲ್ಲಿಂದ ಜನ ಪ್ರತಿಭಟನೆಯ ಹಾದಿಹಿಡಿದರು. ಕೆಲವೊಂದು ಕಡೆಗಳಲ್ಲಿ ಇದರ ವಿರುದ್ದ ಧ್ವನಿ ಏತ್ತಿದವರಿಗೆ ಬೆದರಿಕೆಗಳು ಹಲ್ಲೆ ನಡೆಯಲು ಆರಂಭವಾಯಿತು. ಇದು ಜಿಲ್ಲೆಯನ್ನು ನಡುಗಿಸುವ ಹಂತಕ್ಕೆ ಬೆಳೆಯುತ್ತೆ ಎನ್ನುವ ಭಯ ಜನರಲ್ಲಿ ಶುರುವಾಯಿತು. ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಬೇಕು ಇದರಿಂದ ಜಿಲ್ಲೆಯಲ್ಲಿ ಆಶಾಂತಿ ಸೃಷ್ಟಿಯಾಗುತ್ತಿದೆ ಎಂದು ಸರಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಸಾಕಷ್ಟು ಮನವಿಗಳು ಹೋದಾಗ ಇದರ ವಿರುದ್ದ ಕಾರ್ಯಚರಣೆಯನ್ನು ಸಂಬಂದಪಟ್ಟ ಅಧಿಕಾರಿಗಳು ಶುರುಮಾಡಿದರು. ಇದರ ಪರಿಣಾಮವೇ ಅಕ್ರಮ ಮರಳುಗಾರಿಕೆಗೆ ತಡೆ, ಜಿಲ್ಲೆಯಲ್ಲಿ ಕಟ್ಟಡಗಳು ಅರ್ದಕ್ಕೆ ನಿಲ್ಲಲು ಕಾರಣವಾಯಿತು.
ಸಕ್ರಮ ಅಸಾಧ್ಯವೇ?
ಸರಕಾರ ಮಧ್ಯ ಪ್ರವೇಶ ಮಾಡಿ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ಸಕ್ರಮ ಮಾಡಿ ಕಾನೂನಾತ್ಮಕವಾಗಿ ಮರಳನ್ನು ತೆಗೆಯಲು ಯಾಕೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿದವರಿಗೆ ಅಕ್ರಮ - ಸಕ್ರಮ ಎಂಬ ಕಾನೂನಿನ ಮೂಲಕ ಅವಕಾಶವಿದೆ. ಅಕ್ರಮವಾಗಿ ವಿಧ್ಯುತ್ ಸಂಪರ್ಕ ಪಡೆದವರಿಗೆ ಸರಕಾರ ದಂಡ ಪಡೆದು ಸಕ್ರಮ ಮಾಡುತ್ತದೆ. ಆದರೆ ಮರಳು ಸಮಸೈಯನ್ನು ಮಾತ್ರ ಯಾಕೆ ಸರಕಾರ ಮೀನ ಮೇಷ ಮಾಡುತ್ತದೆ. ಹೊರ ಜಿಲ್ಲೆಗಿಂತಲೂ ಮುಖ್ಯವಾಗಿ ದ.ಕ.ಜಿಲ್ಲೆಯ ಸಾಮಾನ್ಯ ಜನರಿಗೆ ಮನೆ ಕಟ್ಟಲು ಅಗತ್ಯ ಕಚ್ಚಾ ವಸ್ತುವಾಗಿರುವ ಮರಳು ಇಲ್ಲದೆ ಸೊರಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಅದಕ್ಕ ಬೇಕಾದ ಕಾನೂನು ತಂದು ಜಿಲ್ಲೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮರಳುಗಾರಿಕೆಗೆ ಯಾಕೆ ಅವಕಾಶ ಮಾಡಿ ಕೊಡಬಾರದು ಎನ್ನುವ ಪ್ರಶ್ನೆ ಸಾರ್ವಜನಿಕರದ್ದು. ದ.ಕ.ಜಿಲ್ಲೆಗೆ ಪ್ರತ್ಯೇಕ ಕಾನೂನು ತಂದು ಅ ಮೂಲಕ ಸರಕಾರದ ಬೊಕ್ಕಸಕ್ಕೆ ಮರಳಿನ ಹಣ ನೇರವಾಗಿ ಪಾವತಿಯಾಗಲಿ. ಈ ರೀತಿಯಲ್ಲಿ ಮರಳು ನೀತಿ ನಿಯಮಗಳನ್ನು ಸರಕಾರ ರೂಪಿಸಲಿ ಎಂದು ಸಾರ್ವಜನಿಕರ ಅಭಿಪ್ರಾಯ. ಪ್ರಸ್ತುತ ಅತ್ತ ಅಕ್ರಮವೂ ಇಲ್ಲ ಇತ್ತ ಸಕ್ರಮವೂ ಇಲ್ಲ ಒಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲಿ ಮರಳು ಇಲ್ಲದೆ ಯಾವುದೇ ಕೆಲಸವಿಲ್ಲದೆ ಕಂಗಾಲಾಗಿರುವುದು ಮಾತ್ರ ಸತ್ಯ. ಮರಳು ಇಲ್ಲದೆ ಇಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ ಅರ್ದಕ್ಕೆ ನಿಂತಿರುವ ಅದೆಷ್ಟೋ ಮನೆಗಳ ಪಾಡು ಹೇಳಲು ಅಸಾಧ್ಯ. ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯಲ್ಲಿ ಅಶಾಂತಿ ಉಂಟಾಗಿದ್ದು ನಿಜವಾಗಿದ್ದು ಸತ್ಯ. ಅದಕ್ಕೆ ಬ್ರೇಕ್ ಹಾಕಲೂ ಮಾಡಿದ ತಂತ್ರವೂ ಸರಿ. ಆದರೆ ಅಕ್ರಮವನ್ನು ತಡೆಯುವ ಅವಸರದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಬದಲಿ ವ್ಯವಸ್ಥೆ ಮಾಡುವ ಜವಬ್ದಾರಿಯೂ ಜಿಲ್ಲಾಡಳಿತಕ್ಕೆ ಇದೆ ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಮರಳುಗಾರಿಕೆಯನ್ನು ಕಾನೂನಿನ ಚೌಕಟ್ಟಿನಲ್ಲಿ ತಂದು ಹೊಸ ನಿಯಮಗಳನ್ನು ರೂಪಿಸಿ ಜನಸಾಮಾನ್ಯರ ಸಮಸ್ಯೆಗೆ ಸಂಬಂದಪಟ್ಟವರು ಸ್ಪಂದಿಸಬೇಕಾಗಿದೆ. ಕೆಲಸವಿಲ್ಲದೆ ನಮಗೆ ಊಟಕ್ಕೂ ಗತಿಯಿಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸಲು ಕಾಸಿಲ್ಲ ಎಂದು ಮರಳು ಕೆಲಸವನ್ನೇ ನೆಚ್ಚಿಕೊಂಡವರ ಅಳಲು.