ಸುಳ್ಯ, ಅ 5: ಇಲ್ಲಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಕೇರಳಕ್ಕೆ ಅಕ್ರಮವಾಗಿ ಗೋಸಾಗಟ ಮಾಡುತ್ತಿದ್ದವರು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದು ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ಸುಳ್ಯದ ಅರಣ್ಯ ಸಿಬ್ಬಂದಿಗಳಿಗೆ ಜೀಪಿನಲ್ಲಿ ಅಕ್ರಮವಾಗಿ ಕೇರಳಕ್ಕೆ ಬೀಟಿ ಮರ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಈ ಹಿನ್ನೆಲೆ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾಗಿದ್ದರು.
ಕೂರ್ನಡ್ಕದತ್ತ ತೆರಳಿ ಜೀಪನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರು. ಆ ವಾಹನದಲ್ಲಿದ್ದವರು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾದಾಗ ಅರಣ್ಯ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಈ ವೇಳೆ ಅಕ್ರಮ ಗೋ ಸಾಗಾಟಗಾರರು ಅಲ್ಲಿಂದ ವಾಹನ ಬಿಟ್ಟು ಓಡಿ ಪರಾರಿಯಾಗಿದ್ದಾರೆ. ಈ ವೇಳೆ ಜೀಪಿನಲ್ಲಿ ಎರಡು ಜಾನುವಾರು ಪತ್ತೆಯಾಗಿದೆ. ಜೀಪನಲ್ಲಿ ಇದ್ದ ಒಬ್ಬಾತ ಕೇರಳದ ಆಸ್ಪತ್ರೆಗೆ ದಾಖಲಾಗಿ ಅರಣ್ಯ ಸಿಬ್ಬಂದಿಗಳು ನನ್ನ ಮೇಲೆ ಗುಂಡು ಹಾರಾಟ ಮಾಡಿದ್ದಾರೆ ಎಂದು ದೂರಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಕರಣವನ್ನು ಸುಳ್ಯ ಪೊಲೀಸರಿಗೆ ಹಸ್ತಾಂತರಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.