ಮಂಗಳೂರು, ಆ 05: ನಿಲ್ಲಿಸಿದ್ದ ಎರಡು ಕಾರಿನಿಂದ ಬೆಳೆಬಾಳುವ ವಸ್ತುಗಳನ್ನು ಹಾಡುಹಗಲೇ ಕಳ್ಳತನ ಮಾಡಿರುವ ಘಟನೆ ನಗರದ ಬೊಂದೇಲ್ ಚರ್ಚ್ ಬಳಿ ಆ.5 ರ ಭಾನುವಾರ ನಡೆದಿದೆ. ಬಜ್ಪೆ ನಿವಾಸಿ ಸುನೀಲ್ ವಾಲ್ಡರ್ ಅವರ ಒಮಿನಿ ಕಾರಿನಿಂದ ನಗದು ಹಣ 400 ದಿರಮ್ , ಭಾರತ ಹಾಗೂ ದುಬೈ ನ ಡ್ರೈವಿಂಗ್ ಲೈಸನ್ಸ್, ದುಬೈ ಎಮಿರೇಟ್ಸ್ ಐಡಿ, ಕ್ರೆಡಿಟ್ ಕಾರ್ಡ್ ಮುಂತಾದವುಗಳನ್ನು ಕದ್ದೊಯ್ದಿದ್ದಾರೆ. ಇನ್ನು ಕೆನ್ಯೂಟ್ ಪಿಂಟೋ ಅವರ ಮಾಲೀಕತ್ವದ ಅಲ್ಟೋ ಕಾರಿನ ಕಿಟಕಿಯ ಗಾಜು ಒಡೆದು, ನಗದು ಹಾಗೂ ಪವರ್ ಬ್ಯಾಂಕ್ ಕಳವು ಮಾಡಿದ್ದಾರೆ.
ಬೊಂದೇಲ್ ಚರ್ಚ್ ನ ವಾರ್ಷಿಕೋತ್ಸವ ನಡೆಯುತ್ತಿರುವ ಕಾರಣ ಸಾವಿರಾರು ಭಕ್ತರು ಚರ್ಚ್ ಗೆ ಆಗಮಿಸಿದ್ದು ಈ ಹಿನ್ನಲೆಯಲ್ಲಿ ಹಲವು ಕಾರುಗಳನ್ನು ಚರ್ಚ್ ಮುಂಭಾಗದಲ್ಲಿರುವ ಏರ್ ಪೋರ್ಟ್ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕ್ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಒಮಿನಿ ಕಾರಿನಿಂದ ವ್ಯಕ್ತಿಯೋರ್ವ ಕಳ್ಳತನ ಮಾಡಿರುವುದನ್ನು ಗಮನಿಸಿದ ರಿಕ್ಷಾ ಚಾಲಕ ಆತನನ್ನು ಬೆನ್ನಟ್ಟಿದರೂ ಕಳ್ಳ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಸ್ಥಳಕ್ಕೆ ಕಾವೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.