ಉಡುಪಿ, ಆ 05: ಜಿಲ್ಲೆಯ ಮಲ್ಪೆ ಬಂದರು ಮತ್ತು ಉಡುಪಿ ಮಹಿಳಾ ಮೀನು ಮಾರುಕಟ್ಟೆ ಹಾಗೂ ಕುಂದಾಪುರ ಮೀನು ಮಾರುಕಟ್ಟೆಯಲ್ಲಿ ಸಂಗ್ರಹಿಸಿದ ಮೀನುಗಳ ಮಾದರಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ಅವುಗಳಲ್ಲಿ ಫಾರ್ಮಾಲಿನ್ ಅಂಶ ಪತ್ತೆಯಾಗಿಲ್ಲ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸಲಹಾ ಸಮಿತಿ ಸಭೆಯಲ್ಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ವಾಸುದೇವ್ ಹಾಗೂ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಆದೇಶದಂತೆ ಮೀನುಗಳಿಗೆ ಫಾರ್ಮಾಲಿನ್ ರಾಸಾಯನಿಕ ಬಳಕೆ ಮಾಡುವ ಬಗ್ಗೆ ಪರಿಶೀಲಿಸಲು , ಮಲ್ಪೆ ಬಂದರಿನಿಂದ ಹೊರಹೋಗುವ ಮೀನು ಲಾರಿಗಳನ್ನು ಮತ್ತು ಮಲ್ಪೆಗೆ ಆಗಮಿಸುವ ಹೊರ ರಾಜ್ಯದ ಮೀನುಗಾರಿಕಾ ಲಾರಿಗಳನ್ನು ಪರಿಶೀಲಿಸಲಾಗಿದೆ. ಅವುಗಳಲ್ಲಿ ಯಾವುದೇ ಫಾರ್ಮಾಲಿನ್ ಪತ್ತೆಯಾಗಿಲ್ಲ. ಅಲ್ಲದೆ ಉಡುಪಿಯ ಮಹಿಳಾ ಮೀನು ಮಾರುಕಟ್ಟೆಗಳಲ್ಲಿ ಸಹ ಪರೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿಯೂ ಯಾವುದೇ ರಾಸಾಯನಿಕ ಪತ್ತೆಯಾಗಿಲ್ಲ. ಪರಿಶೀಲನೆಗೆ ತೆಗೆದುಕೊಂಡ ಒಟ್ಟು ೧೫ ಮೀನು ಮಾದರಿಗಳನ್ನು ಮೈಸೂರಿನ ಎನ್.ಎ.ಬಿ.ಎಲ್ ಗೆ ಪರಿಶೀಲನೆಗೆ ಕಳುಹಿಸಿದ್ದು ಅಲ್ಲಿಂದ ಬಂದ ವರದಿಯಂತೆ ಜಿಲ್ಲೆಯ ಮೀನುಗಳಲ್ಲಿ ಯಾವುದೇ ರಾಸಾಯನಿಕ ಬಳಕೆ ಆಗಿಲ್ಲ. ಆದ್ದರಿಂದ ಮೀನು ಸೇವನೆ ಕುರಿತಂತೆ ಜನತೆ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಮಾಹಿತಿ ನೀಡಿದರು.