ಉಡುಪಿ, ಆ 05 : ಉದ್ಯಾವರ ಗ್ರಾಮದ ಪಿತ್ರೋಡಿಯ ಗೋವಿಂದ ನಗರದ ವಿದ್ಯಾರ್ಥಿಯೋರ್ವ 15 ದಿನಗಳ ಹಿಂದೆ ಮೃತಪಟ್ಟಿದ್ದು, ಇದಕ್ಕೆ ಕಾರಣ ಅಪರೂಪದ ಜ್ವರ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಜ್ವರಕ್ಕೆ ಕಾರಣವಾದ ನ್ಯೂರೋ ಮೆಲಿಯೊಯಿಡೋಸಿಸ್ ಎಂಬ ಬ್ಯಾಕ್ಟೀರಿಯಾ ಪತ್ತೆ ಹಿನ್ನೆಲೆಯಲ್ಲಿ ನವದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಮಂಡಳಿ (ಎನ್ಸಿಡಿಸಿ) ವೈದ್ಯರ ತಂಡ ಉಡುಪಿಗೆ ಆಗಮಿಸಿದ್ದು, ಬುಧವಾರ ಈ ಕುರಿತ ವರದಿ ನೀಡುವ ಸಾಧ್ಯತೆಗಳಿವೆ. ಇಬ್ಬರು ಮೈಕ್ರೊ ಬಯಾಲಜಿಸ್ಟ್, ಇಬ್ಬರು ವೈದ್ಯರು, ಎನ್ಸಿಡಿಎಸಿಯ ಇಬ್ಬರು ತಜ್ಞ ವೈದ್ಯರು ಸೇರಿದಂತೆ ಒಟ್ಟು ಐದು ಮಂದಿಯ ತಂಡ ಪರಿಸರ ಅವಲೋಕನ, ಬ್ಯಾಕ್ಟಿರೀಯ ಮತ್ತು ಜ್ವರದ ಲಕ್ಷಣಗಳ ಬಗ್ಗೆ ಆಳ ಅಧ್ಯಯನ ನಡೆಸುತ್ತಿದೆ. ಮೃತಪಟ್ಟ ಯುವಕನಿದ್ದ ಪರಿಸರದ ನೀರು, ಮಣ್ಣಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ.
ಮೃತಪಟ್ಟ ದೀಕ್ಷಿತ್ (18) ಗೆ ಜು. 7ರಿಂದ ಜ್ವರ ಆರಂಭವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಆದಾಗಲೇ ನ್ಯೂರೋ ಮೆಲಿಯೊಯಿಡೋಸಿಸ್ ಬ್ಯಾಕ್ಟೀರಿಯಾ ಮೆದುಳಿಗೆ ಸಾಕಷ್ಟು ಹಾನಿ ಮಾಡಿತ್ತು. ದೀಕ್ಷಿತ್ ಚಿಕಿತ್ಸೆಗೆ ಸ್ಪಂದಿಸದೆ ಜು. 21ರ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇನ್ನು ಈ ಜ್ವರ ಮಾರಣಾಂತಿಕ ಅಲ್ಲವಾದರೂ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಒಳಿತು. ಜ್ವರ ಬಂದ ಸೂಕ್ತ ಸಮಯದಲ್ಲೇ ಚಿಕಿತ್ಸೆ ನೀಡಿದರೆ ಜ್ವರ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದೊಂದು ನೈಸರ್ಗಿಕ ಬ್ಯಾಕ್ಟೀರಿಯಾ ಆಗಿದ್ದು, ಕೃಷಿ ಗದ್ದೆ ಪ್ರದೇಶಗಳಂಥ ಮಣ್ಣಿನ ಪರಿಸರದಲ್ಲಿ ಮಳೆ ಬಂದ ನಂತರ ಬ್ಯಾಕ್ಟೀರಿಯಾ ಮಣ್ಣಿನ ಒಳಭಾಗದಿಂದ ನೆಲದ ಮೇಲೆ ಬರುತ್ತದೆ. ಆದರೂ ಈ ಭಾಗದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಉದ್ಯಾವರ ಪಂಚಾಯತ್ ಸಭೆ ನಡೆಸಿ ಜನಜಾಗೃತಿ ಮೂಡಿ ಸಿದೆ. ನೆರೆಯ ಕಾರಣದಿಂದ ಈ ರೋಗ ಕಾಣಿಸಿಕೊಂಡಿರುವ ಸಾಧ್ಯತೆ ಇದ್ದು ಗದ್ದೆ ಮತ್ತು ಕೆಸರಿರುವಲ್ಲಿ ಬರಿಗಾಲಲ್ಲಿ ಓಡಾಡದಂತೆ ಎಚ್ಚರಿಸಲಾಗಿದೆ.