ಕೋಟ, ಆ 05: ಇತ್ತೀಚಿಗಿನ ದಿನಗಳಲ್ಲಿ ಕೆಲವೊಂದು ನಗರ ಪ್ರದೇಶಗಳಲ್ಲಿ ಅನಾಥ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿ, ಬಿಡಾಡಿಗಳಾಗಿ ಬದುಕುತ್ತಿರುವವರಿಗೆ ಸಮಾಜಮುಖಿ ಸಂಘಟನೆಗಳು, ವ್ಯಕ್ತಿಗಳು ಪುನರ್ವಸತಿ ಕಲ್ಪಿಸುವುದು ಸಾಮಾನ್ಯ. ಆದರೆ ಕೋಟದಲ್ಲಿ ಪೊಲೀಸ್ ಇಲಾಖೆ ಕೂಡಾ ತನ್ನ ಜವಾಬ್ದಾರಿಯ ಜೊತೆ ಸಾಮಾಜಿಕ ಸೇವೆಗೆ ತಾವೇನು ಕಡಿಮೆ ಇಲ್ಲವೆಂಬಂತೆ ಕಾರ್ಯಕ್ಕಿಳಿದಿದೆ.
ಕೆಲವು ದಿನಗಳಿಂದ ಕೋಟ ಸುತ್ತಮುತ್ತ ಪರಿಸರದಲ್ಲಿ ಅಲೆದಾಡಿಕೊಂಡಿರುವ ಮಾನಸಿಕ ಅಸ್ವಸ್ಥ ವ್ಯಕ್ತಿ ಒರ್ವನನ್ನು ಶನಿವಾರ ತನ್ನ ವಶಕ್ಕೆ ತೆಗೆದುಕೊಂಡು ಅವನನ್ನು ಶುಭ್ರಗೊಳಿಸಿ ಊಟೊಪಚಾರದ ವ್ಯವಸ್ಥೆ ಕಲ್ಪಿಸಿ ಉಡುಪಿಯ ವಿಶ್ವಾಸದ ಮನೆಗೆ ಸೇರಿಸಿ ತಮ್ಮ ಇಲಾಖೆ ಕೂಡಾ ಮಾನವೀಯತೆಗೆ ಸರಿಸಮಾನ ಎಂಬುವುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾರೆ. ಕೋಟ ಪೊಲೀಸರ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಕೋಟ ಆರಕ್ಷಕರ ಬಗ್ಗೆ ಸಾರ್ವಜನಿಕರ ಪ್ರಶಂಸೆ
ಕೋಟ ಆರಕ್ಷಕ ಠಾಣೆ ಒಂದಲ್ಲ ಒಂದು ರೀತಿಯಲ್ಲಿ ಸಮಾಜಮುಖಿ ಚಿಂತನೆಗೆ ಹೆಸರಾಗಿದೆ. ಕಾಸನಗುಂದು ಪರಿಸರದಲ್ಲಿ ರಾತ್ರಿ ಸಮಯದಲ್ಲಿ ಕಾಡುಕೋಣ ಬಾವಿಗೆ ಬಿದ್ದ ವಿಚಾರ ಸ್ಥಳೀಯರು ಆರಕ್ಷಕ ಇಲಾಖೆಗೆ ತಿಳಿಸಿದ ಮರು ಘಳಿಗೆಯಲ್ಲಿ ಸ್ಥಳಕ್ಕೆ ಧಾವಿಸಿ ಕಾಡುಕೋಣವನ್ನು ಮೇಲತ್ತಲು ಸಹಕರಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ್ದರು. ಈಗ ಕೆಲ ದಿನಗಳಿಂದ ಕೋಟ ಪರಿಸರದಲ್ಲಿ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನ ಬಗ್ಗೆ ಸಾರ್ವಜನಿಕರು ನಿರಾಸಕ್ತಿ ಹೊಂದಿದ್ದು ಇಲಾಖೆಯ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.