ಮೂಡುಬಿದಿರೆ, ಆ 4: ನಗರದ ಕಲ್ಸಂಕ ಬಳಿ ಇರುವ ಗೋಪಾಲಕೃಷ್ಣ ದೇವಸ್ಥಾನ ಮತ್ತು ಕೆರೆ ಬಸದಿಯ ಪಕ್ಕದಲ್ಲಿರುವ ಕೆರೆಗೆ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕಟ್ಟಿಗೆ ಒಡೆಯುವ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಕೋಟೆಬಾಗಿಲು ಮರಿಯಾಡಿ ನಿವಾಸಿ ಮುನ್ನ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಡಿತದ ಚಟವನ್ನು ಹೊಂದಿದ್ದ ಮುನ್ನ ಬೆಳಿಗ್ಗೆಯಿಂದಲೇ ಕಲ್ಸಂಕ ಪರಿಸರದಲ್ಲಿ ಸುತ್ತಾಡಿಕೊಂಡಿದ್ದಾರೆನ್ನಲಾಗಿದೆ. ಮಧ್ಯಾಹ್ನದ ವೇಳೆಗೆ ತನ್ನ ದಾಖಲೆ ಪತ್ರಗಳು, ಬಟ್ಟೆಬರೆ ಹಾಗೂ ಚಪ್ಪಲಿಯನ್ನು ಕೆರೆಯ ದಂಡೆಯಲ್ಲಿಟ್ಟು ಹಾರಿದ್ದು ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಕೆರೆಗೆ ಹಗ್ಗ ಎಸೆದು ಬದುಕಿಸಲು ಪ್ರಯತ್ನಿಸಿದರಾದರು ಪ್ರಯೋಜನವಾಗಿಲ್ಲ. ಬಳಿಕ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಮೇಲೆತ್ತಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.