ಕುಂದಾಪುರ, ಆ 4: ದನ ಕಾಯಲು ಹೋದ ಮಹಿಳೆಯ ಮೇಲೆ ಹುಲಿಯೊಂದು ದಾಳಿ ಮಾಡಿದೆ ಎನ್ನಲಾಗಿದೆ. ಕುಂದಾಪುರ ತಾಲೂಕಿನ ಆಲೂರು ಹಳ್ಳಿಮನೆ ಎಂಬಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಆಲೂರು ಹಳ್ಳಿ ಮನೆ ನಿವಾಸಿ ಮಂಜು ಶೆಟ್ಟಿ ಎಂಬುವರ ಪತ್ನಿ ಶಾಂತಾ ಶೆಟ್ಟಿ(55) ಎಂಬಾಕೆಯೇ ಹುಲಿಯ ದಾಳಿಗೊಳಗಾಗಿ ಆಸ್ಪತ್ರೆ ಸೇರಿದವರು ಎಂದು ತಿಳಿದು ಬಂದಿದೆ.
ಮಂಜು ಶೆಟ್ಟಿ ಹಾಗೂ ಶಾಂತಾ ಶೆಟ್ಟಿ ಇಬ್ಬರೇ ವಾಸವಿದ್ದು, ಶನಿವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ತಮ್ಮ ಹಟ್ಟಿಯಿಂದ ಜಾನುವಾರುಗಳನ್ನು ಮೇಯಿಸಲೆಂದು ಸುಮಾರು ನೂರು ಮೀಟರ್ ದೂರದ ಗದ್ದೆ ಬದಿಯ ಪ್ರದೇಶಕ್ಕೆ ಹೋಗಿದ್ದರು. ಆ ಸಂದರ್ಭ ಗದ್ದೆ ಬದಿಯ ಬೇಲಿ ಕಿತ್ತು ಹೋಗಿದ್ದು, ಅದನ್ನು ಸರಿಪಡಿಸಲು ಮಂಜು ಶೆಟ್ಟಿ ತನ್ನ ಪತ್ನಿಗೆ ಮನೆಗೆ ಹೋಗಿ ಹಗ್ಗ ತರುವಂತೆ ಸೂಚಿಸಿದ್ದರು ಎನ್ನಲಾಗಿದೆ. ಶಾಂತಾ ಶೆಟ್ಟಿ ಮನೆಯಿಂದ ಹಗ್ಗ ತೆಗೆದುಕೊಂಡು ವಾಪಾಸ್ಸು ಬರುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಈ ಸಂದರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಕಿರುಚಾಟಕ್ಕೆ ಬೆದರಿದ ಹುಲಿ ಮಹಿಳೆಯನ್ನು ಅಲ್ಲಿಯೇ ಬಿಟ್ಟು ಕಾಡಿನೊಳಕ್ಕೆ ಓಡಿ ಹೋಗಿದೆ ಎಂದು ಮಂಜು ಶೆಟ್ಟಿ ತಿಳಿಸಿದ್ದಾರೆ. ಶಾಂತಾ ಅವರ ಕೈ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಕುಂದಾಪುರದ ಅರಣ್ಯಾಧಿಕಾರಿ ಶರತ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಹುಲಿಯ ಬೇಟೆಗೆ ಬೋನಿಡಲಾಗಿದೆ. ಘಟನೆ ನಡೆದ ಸ್ಥಳದ ಸಮೀಪದಲ್ಲಿಯೇ ಹಲವು ಮನೆಗಳಿದ್ದು ಮನೆಯವರೆಲ್ಲರೂ ಭಯಭೀತರಾಗಿದ್ದಾರೆ.