ಬೈಂದೂರು, ಆ 03: ಬೈಂದೂರು ತಾಲೂಕಿನ ಹಲವೆಡೆ ನಡೆಯುತ್ತಿದ್ದ ಗೋ ಕಳವಿನ ಹಿನ್ನಲೆಯಲ್ಲಿ ಗೋ ಸಂರಕ್ಷಣೆ ಕಾರ್ಯಾಚರಣೆ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಓರ್ವ ಗೋ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಬೈಂದೂರು ತಾಲೂಕಿನ ನಾಯಕನ ಕಟ್ಟೆ,ಕಂಬದಕೋಣೆ, ಜೋಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ದನ, ಕೋಣಗಳನ್ನು ರಾತ್ರೋ ರಾತ್ರಿ ಹಗ್ಗದ ಸಮೇತ ಕಳವು ಮಾಡಲಾಗುತ್ತಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಹಿಂದೂ ಸಂಘಟಕರ ಮೂಲಕ ಗೋ ಕಳ್ಳರಿಗೆ ಬಲೆ ಬೀಸಿದ್ರು.
ಆ 02 ರ ಗುರುವಾರ ತಡರಾತ್ರಿ ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯ ಬೈಂದೂರು ತಾಲೂಕಿನ ಕಾರ್ಯಕರ್ತರ ನಾಲ್ಕು ತಂಡ ನಾಯಕನ ಕಟ್ಟೆ, ಕಂಬದಕೋಣಿ ಭಾಗದಲ್ಲಿ ಕಾದು ಕುಳಿತಿತ್ತು. ರಾತ್ರಿ 12:30 ಕ್ಕೆ ಪಿಕಪ್ ವಾಹನದಲ್ಲಿ ಬಂದ ಗೋಕಳ್ಳರು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಮೂರು ಗೋವನ್ನು ಕದ್ದು ಪಿಕಪ್ ವಾಹನದಲ್ಲಿ ತುಂಬಿಕೊಂಡು ಸಾಗಿಸುವಾಗ ಹಿಂಬಾಲಿಸಿದ ಕಾರ್ಯಕರ್ತರ ಪಡೆ ಮೂರು ಗೋವುಗಳನ್ನು ರಕ್ಷಿಸಿ ಒರ್ವ ಗೋ ಕಳ್ಳನನ್ನು ಹಿಡಿದು ಪೋಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಯ್ತು. ಈ ಕಾರ್ಯಾಚರಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗೋ ಕಳ್ಳರು ವಾಹನ ಹರಿಸಿ ಅಪಘಾತಕ್ಕೆ ಯತ್ನಿಸಿದ್ರು. ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಂದೂರು, ಶಿರೂರು, ಮಾರ್ಗದಲ್ಲಿ ಸಾಗಿದ ಇವರನ್ನು ಶಿರಾಲಿ ಬಳಿ ಹಿಡಿಯುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಮೂರು ಗೋವು ರಕ್ಷಿಸಿ ಇಬ್ಬರು ಗೋ ಕಳ್ಳರಲ್ಲಿ ಓರ್ವನನ್ನು ಬೈಂದೂರು ಪೊಲೀಸರಿಗೆ ಒಪ್ಪಿಸಲಾಯಿತು. ಇದೀಗ ತಪ್ಪಿಸಿಕೊಂಡ ಗೋ ಕಳ್ಳನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.