ಮಂಗಳೂರು, ಅ 1: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ವೈಭವದ ಮಂಗಳೂರು ದಸರಾ ಮೆರವಣಿಗೆ ರವಿವಾರ ಬೆಳಗ್ಗೆ ಸಮಾಪ್ತಿಯಾಯಿತು. ನವ ದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹವನ್ನು ದೇವಳದ ಆವರಣದ ಪುಷ್ಕರಣಿಯಲ್ಲಿ ಜಲಸ್ತಂಭನಗೊಳಿಸುವುದರೊಂದಿಗೆ ವಿದ್ಯುಕ್ತವಾಗಿ ತೆರೆಕಂಡಿತು.
ಕುದ್ರೋಳಿಯಿಂದ ಶನಿವಾರ ಸಂಜೆ ಗಣಪತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹದ ಜೊತೆ ನವದುರ್ಗೆಯರ ವಿಗ್ರಹಗಳ ವರ್ಣ ರಂಜಿತ ಮೆರವಣಿಗೆ ನಗರದ ಕಂಬಲ ರಸ್ತೆಯ ಮೂಲಕ ಬಲ್ಲಾಳ್ಬಾಗ್, ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಮುಂಭಾಗದಿಂದ, ವಿಶ್ವವಿದ್ಯಾನಿಲಯ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಳದ ಮುಂಭಾಗದಿಂದ ರಥಬೀದಿ, ಅಳಕೆ ಮಾರ್ಗವಾಗಿ ಮತ್ತೆ ಕುದ್ರೋಳಿ ತಲುಪಿತು. ವರ್ಣ ರಂಜಿತ ಮೆರವಣಿಗೆ ಮರಳಿ ಕುದ್ರೋಳಿ ತಲುಪಿದಾಗ ರವಿವಾರ ಬೆಳಗ್ಗೆ ೮ ಗಂಟೆಯಾಗಿತ್ತು. 9 ಗಂಟೆಯ ಸುಮಾರಿಗೆ ಶಾರದಾ ವಿಗ್ರಹದ ವಿಸರ್ಜನೆಯೊಂದಿಗೆ ದಸರಾ ಸಮಾಪನಗೊಂಡಿತು.
ಈ ಬಾರಿಯ ದಸರಾ ಮೆರವಣಿಗೆಗೆ ವಾರಾಂತ್ಯದ ರಜೆ ಇದ್ರಿಂದ ನಗರದೆಲ್ಲೆಡೆ ಕಿಕ್ಕಿರಿದ ಜನಸಂದಣಿ ಕಂಡುಬಂದಿತ್ತು. ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸು ತ್ತಿದ್ದ ನಗರ ಉತ್ಸವಕ್ಕೆ ಮೆರುಗು ನೀಡಿತ್ತು. ಪೌರಾಣಿಕ ಸನ್ನಿವೇಶಗಳ ಟ್ಯಾಬ್ಲೋಗಳು, ಹುಲಿ ವೇಷದ ತಂಡಗಳು, ನಾಗಾ ಸಾಧುಗಳ ಟ್ಯಾಬ್ಲೋ, ಡೊಳ್ಳು ಕುಣಿತ, ಗೊಂಬೆ ಕುಣಿತ, ಭಜನಾ ತಂಡಗಳು, ಕುದ್ರೋಳಿ ಕ್ಷೇತ್ರದ ಸಾಂಪ್ರದಾಯಿಕ ಚೆಂಡೆ ಹಾಗೂ ವಾದ್ಯ ಘೋಷಗಳೊಂದಿಗೆ ಕಲಾವಿದರು ಮೆರವಣಿಗೆಯನ್ನು ವರ್ಣರಂಜಿತವನ್ನಾಗಿಸಿದರು.