ಕಾಸರಗೋಡು, ಆ 2: ಇಲ್ಲಿನ ಕಾರಡ್ಕ ಗ್ರಾಮ ಪಂಚಾಯತ್ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸಿಪಿಎಂ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಜಯ ಲಭಿಸಿದ್ದು, ಇದರಿಂದ 18 ವರ್ಷದ ಬಿಜೆಪಿ ಆಡಳಿತ ಅಂತ್ಯಗೊಂಡಿದೆ. ಗ್ರಾಮ ಪಂಚಾಯತ್ ನಲ್ಲಿ ಅಭಿವೃದ್ಧಿ ಮೊಟಕು ಗೊಂಡಿದೆ ಎಂದು ಸಿಪಿಎಂ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಯು ಡಿ ಎಫ್ ಸದಸ್ಯರು ಬೆಂಬಲಿಸಿದ್ದು, ಇದರಿಂದ 8-7 ಅಂತರದಿಂದ ಗೊತ್ತುವಳಿ ಅಂಗೀಕಾರಗೊಂಡಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಪ್ನಾ ಜೆ. ವಿರುದ್ಧ ಸಿಪಿಎಂನ ವಿಜಯ ಕುಮಾರ್ ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿದ್ದರು. ಕಾರಡ್ಕ ಬ್ಲೋಕ್ ಪಂಚಾಯತ್ ಕಾರ್ಯದರ್ಶಿ ಬಾಲಕೃಷ್ಣನ್ ಉಪಸ್ಥಿತಿಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ನಡೆದು ಬಳಿಕ ಮತ ಚಲಾಯಿಸಲಾಯಿತು. 2015 ರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಯುಡಿಎಫ್ ಸ್ಪರ್ಧಿಸಿತ್ತು. ಆದರೆ ಎಲ್.ಡಿ.ಎಫ್ ಸದಸ್ಯರು ಮತದಾನ ದಿಂದ ಹೊರಗುಳಿದಿದ್ದರು. ಇದರಿಂದ ಏಳು ಸದಸ್ಯ ಬಲದ ಬಿಜೆಪಿಗೆ ಅಧಿಕಾರ ಲಭಿಸಿತ್ತು. ಆದರೆ ಈ ಬಾರಿ ಸಿಪಿಎಂ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಯು ಡಿ ಎಫ್ ಬೆಂಬಲ ನೀಡಿದ್ದರಿಂದ ಹದಿನೆಂಟು ವರ್ಷದ ಬಿಜೆಪಿ ಆಡಳಿತ ಕೊನೆ ಗೊಂಡಿದೆ. ಗ್ರಾಮ ಪಂಚಾಯತ್ ಪರಿಸರದಲ್ಲಿ ಆದೂರು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಇನ್ನು ಕಾರಡ್ಕದ ಬಳಿಕ ಯಾರಿಗೂ ಸ್ಪಷ್ಟ ಬಹುಮತ ಇಲ್ಲದ ಎಣ್ಮಕಜೆ ಗ್ರಾಮ ಪಂಚಾಯತ್ ನಲ್ಲೂ ಬಿಜೆಪಿ ಆಡಳಿತದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಬಿಜೆಪಿ ಆಡಳಿತ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದು, ಸಿಪಿಎಂ ಮತ್ತು ಸಿಪಿಐ ನ ಬೆಂಬಲ ಲಭಿಸಿದ್ದಲ್ಲಿ ಅವಿಶ್ವಾಸಕ್ಕೆ ಗೆಲುವು ಲಭಿಸಲಿದೆ. ಕಾರಡ್ಕದಲ್ಲಿ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಬೆಂಬಲ ಸಿಪಿಎಂಗೆ ಲಭಿಸಿದ್ದರಿಂದ ಎಣ್ಮಕಜೆಯಲ್ಲಿ ಸಿಪಿಎಂ ಬೆಂಬಲ ಲಭಿಸುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ.