ಚಿತ್ರ: ದಯಾ ಕುಕ್ಕಾಜೆ
ಮಂಗಳೂರು, ಆ 01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಷಾಢವನ್ನು ಆಟಿ ತಿಂಗಳು ಎಂದು ಕರೆಯುತ್ತಾರೆ. ಕರ್ನಾಟಕದ ಉಳಿದೆಲ್ಲೆಡೆ ಶ್ರಾವಣ ಸಂಭ್ರಮವಿದ್ದರೆ, ಕರಾವಳಿಯಲ್ಲಿ ಮಾತ್ರ ಆಷಾಢಮಾಸವನ್ನು ಆಚರಿಸಲಾಗುತ್ತದೆ ಇದಕ್ಕೆ ಕಾರಣ ಇಲ್ಲಿ ಅನುಸರಿಸುವ ಸೌರಮಾನ ಪಂಚಾಂಗವೇ ಇದಕ್ಕೆ ಕಾರಣ.ಈ ತಿಂಗಳಲ್ಲಿ ಇಲ್ಲಿ ನಡೆಯುವ ಒಂದು ಗಮನಾರ್ಹ ಆಚರಣೆ ಎಂದರೆ, ಆಟಿ ಕಳೆಂಜ...
ಆಟಿ ಕಳೆಂಜ ಅಂದರೆ ತುಳು ನಾಡಿನ ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ.ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ನಲಿಕೆ ಎನ್ನುವ ಜನವರ್ಗದಲ್ಲಿ ಕಾಣಸಿಗುವ ಕುಣಿತ. ಇದೇ ಕುಣಿತವನ್ನು ಬೆಳ್ತಂಗಡಿ ಭಾಗದಲ್ಲಿ ಮೇರ ಜನವರ್ಗದವರು ನಡೆಸಿಕೊಡುವುದುಂಟು. ಈ ಕುಣಿತವನ್ನು ಆಷಾಡ ತಿಂಗಳಲ್ಲಿ ಮಾತ್ರ ನಡೆಸುವುದರಿಂದ ಇದನ್ನು ಆಟಿ ಕಳಂಜ ಎಂತಲೂ ಕರೆಯಲಾಗಿದೆ. ಕಳೆಂಜ ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂದರ್ಥವೂ ಇದೆ. ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ 'ತೆಂಬರೆ'-ಯನ್ನು (ಚರ್ಮ ವಾದ್ಯ)ಪುರುಷ ವ್ಯಕ್ತಿ ನುಡಿಸುತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇವುಗಳು ಆಟಿಕಳೆಂಜನ ವೇಷಗಳು. ಬೆಳ್ತಂಗಡಿ ತಾಲ್ಲೂಕಿನ ಮೇರರಲ್ಲಿನ ಆಟಿ ಕಳೆಂಜ ವೇಷದಲ್ಲಿ ಕಳೆಂಜನ ವೇಷ ಹಾಕುವವರು ವಯಸ್ಕರು ಮತ್ತು ಕೈಯಲ್ಲಿ 'ದುಡಿ '-ಎನ್ನುವ ವಿಶೇಷ ವಾದ್ಯವನ್ನು ಹಿಡಿದು ನುಡಿಸುತ್ತಾ ಪಾಡ್ದನವನ್ನು ಹೇಳುತ್ತಾ ಕುಣಿಯುತ್ತಾರೆ. ಕಳೆಂಜನಿಗೆ ದೈವದ ನೆಲೆ ಇಲ್ಲದಿರುವುದರಿಂದ ಗುಡಿಗಳನ್ನು ಕಟ್ಟಿಸಿ ಆರಾಧಿಸುವ ಕ್ರಮ ಇಲ್ಲ. ಆಷಾಢದ ಒಂದು ತಿಂಗಳಲ್ಲಿ ನಲಿಕೆಯವರು ಕಳೆಂಜದ ವೇಷ ಹಾಕಿ ಕಳೆಂಜದ ಇರುವಿಕೆಯನ್ನು ಪ್ರಸ್ತುತ ಪಡಿಸುತ್ತಾರೆ.