ಮಂಗಳೂರು, ಸೆ 30: ಕಲೆ ಯಾರೊಬ್ಬರ ಸೊತ್ತು ಅಲ್ಲ. ಅದು ಯಾರಿಗೆ ಬೇಕಾದರೂ ಒಲಿಯಬಹುದು. ಇದಕ್ಕೆ ಸಾಕ್ಷಿ ಉಡುಪಿಯ ಕುವರಿ ಸುಷ್ಮಾರಾಜ್. ಹುಲಿಕುಣಿತ ಅಂದರೆ ಅದು ಬರೀ ಹುಡುಗರಿಗೆ ಮಾತ್ರ ಸೀಮಿತವಾಗಿದ್ದ ಕಾಲವೊಂದಿತ್ತು. ಆದ್ರೆ ಈ ಪ್ರತಿಭೆ ಕೇವಲ ಹುಡುಗರಿಗೆ ಮಾತ್ರ ಸೀಮಿತ ಎಂಬ ಹುಲಿವೇಷದ ಸಂಪ್ರದಾಯಕ್ಕೆತಿಲಾಂಜಲಿಯಿಟ್ಟು ಜನಪದ ಕಲೆ ಹುಲಿವೇಷದ ತಾಸೆಯ ಸದ್ದಿಗೆ ಹಲವಾರು ವರುಷಗಳಿಂದ ಹೆಜ್ಜೆ ಹಾಕುತ್ತಿದ್ದಾಳೆ. ಬಾಲ್ಯದಿಂದಲೇ ಹುಲಿಕುಣಿತದತ್ತ ಆಕರ್ಷಿತಳಾಗಿದ್ದ ಸುಷ್ಮಾರಾಜ್ ಇದೀಗ ಪೊಣ್ಣು ಪಿಲಿ ಎಂದೇ ಕರಾವಳಿಯಾದ್ಯಂತ ಪರಿಚಿತಳಾಗಿದ್ದಾಳೆ.
ತುಳುನಾಡಿನ ಜನಪದ ಕಲೆ ಹುಲಿಕುಣಿತದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಈ ಪ್ರತಿಭೆ ತಾಸೆಯ ಸದ್ದಿಗೆ ಹೆಜ್ಜೆ ಹಾಕಿದಳೆಂದರೆ ಹುಡುಗರಿಗಿಂತಲೂ ಒಂದು ಸ್ಟೆಪ್ ಮುಂದೆ. ಚಿಗುರು ಮೀಸೆಯ ಹುಡುಗರ ಹೆಜ್ಜೆಗಾರಿಕೆಯನ್ನು ನಾಚಿಸುವಂತ ಅದ್ಭುತ ಕುಣಿತ ಈಕೆಯದು. ತಂದೆ ಅಶೋಕ್ ರಾಜ್ ಅವರಿಗೆ ಹುಲಿವೇಷದಲ್ಲಿ ಅತೀವ ಆಸಕ್ತಿ ಇತ್ತು. ತಂದೆಯ ಕಲಾಭಿರುಚಿಯನ್ನೇ ಬಳುವಳಿಯಾಗಿ ಪಡೆದ ಸುಷ್ಮಾರಾಜ್ ಹುಲಿಕುಣಿತದಲ್ಲಿ ಗತ್ತು, ಗೈರತ್ತಿನ ಸ್ಟೆಪ್ ಹಾಕುವ ಮೂಲಕ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾಳೆ.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ದಸರಾ ಸಂಭ್ರಮದಲ್ಲಿ ಭಾಗವಹಿಸುವ ಪ್ರತಿಷ್ಠಿತ ಬಿರುವೆರ್ ಕುಡ್ಲ ಹುಲಿವೇಷ ತಂಡದಲ್ಲಿ ಈಕೆ ಮೊದಲ ಬಾರಿ ಹೆಜ್ಜೆ ಹಾಕಲಿದ್ದಾಳೆ. ಕರಾವಳಿಯ ಜನಪದ ಕಲೆ, ಸಂಸ್ಕ್ರತಿ, ಸಂಪ್ರದಾಯ ಉಳಿಯಬೇಕು, ಮುಂದಿನ ಪೀಳಿಗೆಗೆ ತಿಳಿಸಬೇಕು ಅನ್ನುವ ಆಕಾಂಕ್ಷೆ ಹೊಂದಿರುವ ಈ ಕಲಾವಿದೆಯ ಪ್ರತಿಭೆಯನ್ನು ನಾವೆಲ್ಲರೂ ಗೌರವಿಸೋಣ, ಪ್ರೋತ್ಸಾಹಿಸೋಣ..