ಕುಂದಾಪುರ, ಆ 02: ಕತ್ತಲೆಕೋಣೆ ಚಲನಚಿತ್ರ ಆಗಸ್ಟ್ 10 ರಂದು ರಾಜ್ಯದಾದ್ಯಂತ ಬಿಡುಗಡೆ ಕಾಣಲಿದೆ. ಉಡುಪಿಯ ಕುಂದಾಪುರ ಮೂಲದ ಯುವ ಕಥೆಗಾರ, ಪತ್ರಕರ್ತ ಸಂದೇಶ ಶೆಟ್ಟಿ ಆಜ್ರಿ ಸುಮಾರು 8 ವರ್ಷಗಳ ಹಿಂದೆ ಬರೆದ ಕಥೆಯನ್ನೆ, ಚಿತ್ರ ಕಥೆಯನ್ನಾಗಿಸಿ ಪ್ರಪ್ರಥಮ ಬಾರಿಗೆ ತೆರೆಯ ಹಿಂದೆ ನಿರ್ದೇಶಕರಾಗಿ ಮತ್ತು ತೆರೆಯ ಮುಂದೆ ಚಿತ್ರದ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ ಎಂದು ಕತ್ತಲೆ ಕೋಣೆ ಚಿತ್ರ ತಂಡದ ಅಶ್ವತ್ಥ್ ಆಚಾರ್ಯ ತಿಳಿಸಿದರು.
ಕುಂದಾಪುರ ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಬಹುತೇಕ ಹೊಸ ತಾರಾಂಗಣವಿರುವ ಚಿತ್ರ ನೈಜ ಕಥೆಯನ್ನು ಹೊಂದಿದೆ. ಸೈನಿಕನಾಗ ಬಯಸುವ ಹುಡುಗನ ಆಸೆ ಹೇಗೆ ಕಮರಿ ಹೋಯ್ತು, ಈ ವ್ಯವಸ್ಥೆ ಆತನ ಕನಸನ್ನೆ ದಾಳವಾಗಿಸಿಕೊಂಡು ಹೇಗೆ ಸೈಕೋ ಆಗಿ ಪರಿವರ್ತನೆ ಮಾಡುವಂತೆ ಮಾಡುತ್ತೆ ಎನ್ನುವುದೆ ಚಿತ್ರ ಒಂದು ಕಥೆ. ಈ ಚಲನಚಿತ್ರದ ಟೈಟಲ್ ತಿಳಿಸುವಂತೆ ಒಂದು ಸೈಕಾಲಾಜಿಕ್ ಹಾರರ್ ಥ್ರಿಲ್ಲರ್ ಸಿನೆಮಾ. ಇಲ್ಲಿ ಒಂದು ಕುಟುಂಬದ ಐಷಾರಾಮಿ ಜೀವನದ ಪರಿಚಯವಿದೆ, ವಿದ್ಯಾರ್ಥಿಯೋರ್ವನ ಕನಸಿದೆ, ಶಾಲಾ ಜೀವನದ ಚಿತ್ರಣವಿದೆ, ಪತ್ರಿಕೋದ್ಯಮದ ಎರಡು ಮುಖಗಳ ಪರಿಚಯವಿದೆ ಮತ್ತು ವ್ಯವಸ್ಥೆಯನ್ನು ಹೇಗೆ ದುಷ್ಟ ಶಕ್ತಿಗಳು ಬಳಸಿಕೊಳ್ಳುತ್ತದೆ ಅದಕ್ಕೆ ಪೂರಕವಾಗಿ ಪರಿಸರ ಹೇಗೆ ನಿರ್ಮಾಣವಾಗುತ್ತದೆ ಎನ್ನುವ ಸಂಪೂರ್ಣ ಚಿತ್ರಣ ಇದರಲ್ಲಿ ನೋಡಬಹುದಾಗಿದೆ ಎಂದರು.
ಬಹುತೇಕ 85% ರಾತ್ರಿ ವೇಳೆಯಲ್ಲಿಯೇ ಚಿತ್ರೀಕರಣ ನಡೆದಿದ್ದು, ಚಿತ್ರದ ಹೊಸ ತಂಡದ ಶ್ರಮ ಚಿತ್ರಕ್ಕೆ ಮೆರುಗನ್ನು ನೀಡಿದೆ. ಚಿತ್ರ ನಿರ್ಮಾಣದ ವೇಳೆ ಸಾಕಷ್ಟು ಚಿತ್ರ ವಿಚಿತ್ರ ಘಟನೆಗಳು ನಡೆದ ಚಿತ್ರ ತಂಡವನ್ನು ಭಯ ಭೀತವಾಗಿಸಿತ್ತು. ಸಾಕಷ್ಟು ವಿಚಿತ್ರ ಘಟನೆಗಳಿಗೆ ಕತ್ತಲೆಕೋಣೆ ಚಿತ್ರ ತಂಡ ಸಾಕ್ಷಿಯಾಗಿದೆ. ಆದರೆ ವಿಚಿತ್ರ ಘಟನೆಗಳಿಗೂ ಪೂರಕವಾಗಿ ಧನಾತ್ಮಕ ಶಕ್ತಿಯೊಂದು ಚಿತ್ರತಂಡದ ಜೊತೆಗೆ ಇದ್ದು ಕಾಪಾಡಿರುವುದು, ಈ ಎಲ್ಲಾ ಘಟನೆಯಲ್ಲಿ ಅನುಭವಕ್ಕೆ ಬಂದಿದೆ ಎಂದರು.
ನಾಯಕನ ಪಾತ್ರದಲ್ಲಿ ಪತ್ರಕರ್ತ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಮುಂಬೈ ಕನ್ನಡತಿ ಹೇನಿಕಾ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪಿ.ಆರ್.ಅಮೀನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೀನಿವಾಸ ಶಿವಮೊಗ್ಗ ಸಹ ನಿರ್ಮಾಪಕರಾಗಿ ತಂಡಕ್ಕೆ ಬೆನ್ನೆಲುಬಾಗಿದ್ದಾರೆ. ಆರ್.ಕೆ. ಮಂಗಳೂರು ಛಾಯಾಗ್ರಹಣ, ಸಹ ನಿರ್ದೇಶನದಲ್ಲಿ ಜೀತ್ ಜೋಸೆಫ್ ಸಾತ್ ನೀಡಿದ್ದಾರೆ. ಅರುಣ್ ರಾಜ್ ಸಂಗೀತ, ಅಶೋಕ್ ನೀಲಾವರ ಮತ್ತು ನಾಗರಾಜ್ ರಾವ್ ರವರ ಸಾಹಿತ್ಯ ಚಿತ್ರಕ್ಕೆ ಜೀವ ನೀಡಿದೆ. ಮುಖ್ಯ ಭೂಮಿಕೆಯಲ್ಲಿ ವೈಶಾಖ್ ಅಮೀನ್, ರತಿಕ್ ಮುರುಡೇಶ್ವರ್, ಅಶ್ವಥ್ ಆಚಾರ್ಯ, ರಘು ಪಾಂಡೇಶ್ವರ, ಸುನಿಲ್ ಉಪ್ಪುಂದ, ರೋಹಿತ್ ಅಂಪಾರ್, ಚಂದ್ರ ವಸಂತ, ಚಿತ್ರಕಲಾ ರಾಜೇಶ್, ಶ್ರೀನಿವಾಸ್ ಪೈ, ಮಂಜುನಾಥ್ ಸಾಲಿಯನ್, ನಾಗರಾಜ್ ರಾವ್ ನಟಿಸಿದ್ದಾರೆ.
ಸರಿಗಮಪ ರಿಯಾಲಿಟಿ ಶೋನ ರನ್ನರ್ ಅಪ್ ಮೆಹಬೂಬ್ ಸಾಬ್ ಹಾಡಿದ ಒಂಟಿ ಕಾನನದಿ ನೀ ಗೀತೆಯಂತು ಯೂ ಟ್ಯೂಬ್ ನಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದು, ಸುಮಾರು 2.2 ಮಿಲಿಯನ್ ವಿವ್ಯೂ ಆಗಿದೆ. ಸುಮಾರು 1.5 ಕೋಟಿ ವೆಚ್ಚದ ಸಿನಿಮಾ ಇದಾಗಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಚಂದ್ರಶೇಖರ್, ಓಂಗುರು ಬಸ್ರೂರು, ರತಿಕ್ ಮುರ್ಡೇಶ್ವರ್, ಸುನೀಲ್ ಉಪ್ಪುಂದ ಉಪಸ್ಥಿತರಿದ್ದರು.