ಬೈಂದೂರು, ಆ 02 : ಕಡಲ್ಕೊರೆತ ತಡೆಗೆ ದಶಕಗಳಿಂದ ಚಾಲ್ತಿಯಲ್ಲಿರುವ ಕಲ್ಲುಗಳ ಜೋಡಣೆ ನಿರೀಕ್ಷಿತ ಯಶಸ್ಸು ನೀಡುತ್ತಿಲ್ಲ. ಅದಕ್ಕಾಗಿ ಈಗ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಹೆದ್ದಾರಿ ಹಾದು ಹೋಗುವ ಮರವಂತೆ-ತ್ರಾಸಿ ನಡುವಿನ ಕಡಲತೀರ ಸಮುದ್ರ ಕೊರೆತ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಲ್ಲಿ ಎಡಿಬಿ ನೆರವಿನಿಂದ ರೂ 83 ಕೋಟಿ ವೆಚ್ಚದಲ್ಲಿ ಅಂತಹ ಸುಸ್ಥಿರ ಕಾಮಗಾರಿ ನಡೆಸಲಾಗುತ್ತಿದೆ ಎಂದು ಯೋಜನೆಯ ಗುತ್ತಿಗೆದಾರ ಕೊಮಾಕೊ ಕಂಪನಿಯ ಉಪ ಪ್ರಬಂಧಕ ಕಿಶೋರ್ಕುಮಾರ್ ಹೇಳಿದರು. ಬುಧವಾರ ಮಾಧ್ಯಮ ಪ್ರತಿನಿಧಿಗಳನ್ನು ಯೋಜನಾ ಪ್ರದೇಶಕ್ಕೆ ಕರೆಸಿಕೊಂಡು ಕಾಮಗಾರಿಯ ಮಾಹಿತಿ ನೀಡಿದರು.
ಇಲ್ಲಿ ನಡೆಸುತ್ತಿರುವ ಕಾಮಗಾರಿ ಸಾಂಪ್ರದಾಯಿಕ ಕಡಲ್ಕೊರೆತ ತಡೆಗೋಡೆಯಲ್ಲ. ಇದರಲ್ಲಿ ಸಮುದ್ರ ದಂಡೆಯುದ್ದಕ್ಕೆ ಕಲ್ಲುಗಳನ್ನು ಜೋಡಿಸುವ ಬದಲಿಗೆ ದಂಡೆಗೆ ಲಂಬವಾಗಿ ಗ್ರಾಯನ್ ಅಥವಾ ಕರೆಗೋಡೆ ಎಂದು ಕರೆಯಲಾಗುವ ನಿರ್ಮಾಣಗಳನ್ನು ರಚಿಸಲಾಗುವುದು. ಇವು ತೀರ ಪ್ರದೇಶದ ಸವಕಳಿಯನ್ನು ತಡೆಯುತ್ತದೆ. ಅದರ ಜತೆಗೆ ಒಂದು ಬದಿ ಶೇಖರಣೆಯಾಗುವ ಮರಳಿನ ಕಾರಣ ಸಮುದ್ರ ಹಿಂದಕ್ಕೆ ಸರಿದು ಮರಳಿನ ದಂಡೆ ವಿಸ್ತಾರಗೊಳ್ಳುತ್ತದೆ. ಅದರಿಂದ ಬೀಚ್ನ ಸೌಂದರ್ಯ ಹೆಚ್ಚುತ್ತದೆ. ಮರವಂತೆ-ತ್ರ್ರಾಸಿಯಲ್ಲಿ ಈಗಾಗಲೇ ಶೇ 40 ಕಾಮಗಾರಿ ಮುಗಿದಿದೆ. ಮುಂದಿನ ವರ್ಷ ಮಾರ್ಚ್ಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
ಕಾಮಗಾರಿಯ ವಿನ್ಯಾಸವನ್ನು ವಿವರಿಸಿದ ಅವರು 3.5 ಕಿಲೋಮೀಟರ್ ಪ್ರದೇಶದಲ್ಲಿ ಪ್ರತಿ 120 ಮೀಟರ್ ಅಂತರದಲ್ಲಿ 24 ಕರೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ಸಮುದ್ರ ಹೆದ್ದಾರಿಗೆ ತೀರ ನಿಕಟವಾಗಿರುವ ಸ್ಥಳದಲ್ಲಿ 9 ಟಿ ಮಾದರಿಯ ಗೋಡೆಗಳು ಮತ್ತು ಉಳಿದೆಡೆ ೧೫ ಸಾದಾ ಕರೆಗೋಡೆಗಳು ಇರುತ್ತವೆ. ಸಾದಾ ಕರೆಗೋಡೆಗಳು 100 ಮೀಟರ್ ಉದ್ದ, ತಳದಲ್ಲಿ 30 ಮೀಟರ್ ಮತ್ತು ಶಿರದಲ್ಲಿ 4 ಮೀಟರ್ ಅಗಲವಾಗಿರುತ್ತವೆ. ಟಿ ಮಾದರಿಯವು 40 ಮೀಟರ್ ಉದ್ದ, ತಳದಲ್ಲಿ 36 ಮೀಟರ್ ಮತ್ತು ಶಿರದಲ್ಲಿ 5 ಮೀಟರ್ ಅಗಲವಾಗಿರುತ್ತವೆ. ಇಡೀ ಟಿ ಮಾದರಿಯ ಗೋಡೆ ಒಟ್ಟು 76ಮೀಟರ್ ಉದ್ದವಾಗಿರುತ್ತವೆ. ಈ 9 ಕರೆಗೋಡೆಗಳ ಹೊರಮೈಯಲ್ಲಿ ಕಾಂಕ್ರೀಟಿನ ಟೆಟ್ರಾಪಾಡ್ಗಳ ರಕ್ಷಣೆ ಒದಗಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ಕರೆಗೋಡೆಗಳ ತಳದ 1.5 ಮೀಟರ್ ಮರಳನ್ನು ತೆಗೆದು ಅಲ್ಲಿ ಜಿಯೋಫ್ಯಾಬ್ರಿಕ್ ಶೀಟ್ ಹರಡಿ ಅದರ ಮೇಲೆ ಕಲ್ಲುಗಳನ್ನು ಪೇರಿಸಲಾಗುವುದರಿಂದ ಕರೆಗೋಡೆಗಳು ದೀರ್ಘಕಾಲ ಕುಸಿಯದೆ ಉಳಿಯುತ್ತವೆ. ಬಂದರು ಇಲಾಖೆಯ ಉಸ್ತುವಾರಿಯಲ್ಲಿ ಈ ತೆರನಾದ ಕರೆಗೋಡೆಗಳ ನಿರ್ಮಾಣದಲ್ಲಿ ಪರಿಣತಿ ಇರುವ ತಮ್ಮ ಕಂಪನಿ ಕಾಮಗಾರಿ ನಡೆಸುತ್ತಿದೆ ಎಂದರು. ಕಾಮಗಾರಿಯನ್ನು ವೀಕ್ಷಿಸಿದ ಮಾಧ್ಯಮ ಪ್ರತಿನಿಧಿಗಳು ಈಗಾಗಲೇ ಪೂರ್ಣಗೊಂಡ ಕರೆಗೋಡೆಗಳ ನಡುವೆ ಮರಳು ಶೇಖರಣೆಯಾಗಿ ತೀರ ವಿಸ್ತರಣೆಯಾಗಿರುವುದನ್ನು ಗಮನಿಸಿದರು. ಕಂಪನಿಯ ಇಂಜಿನಿಯರ್ ವೆಂಕಟೇಶ ಇದ್ದರು.