ಬೆಳ್ತಂಗಡಿ, ಆ 02: ಇಲ್ಲಿನ ಇಂದಬೆಟ್ಟು ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಮದನ್ಮೋಹನ್ ಬುಧವಾರ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ ಘಟನೆ ಆ.01 ರ ಬುಧವಾರ ನಡೆದಿದೆ.
ಇಂದಬೆಟ್ಟುಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ದಿನದಿಂದ ಮರಳು ಸಾಗಾಟ ನಡೆಯುತ್ತಿದ್ದರೂ ಗ್ರಾಮ ಪಂಚಾಯತ್ ಆಡಳಿತ ಮತ್ತು ಗಣಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿತ್ತು. ಹಿಟಾಚಿ, ಜೆಸಿಬಿ ಮೂಲಕ ಅವ್ಯಾಹತವಾಗಿ ಮರಳುನ್ನು ಬಗೆದು ಬಗೆದು ಸಾಗಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಲಂಚ ಕೊಟ್ಟುರಾಜಾರೋಷವಾಗಿ ಮರಳು ಸಾಗಾಟ ನಡೆಯುತ್ತಿದೆ. ಪಂ.ಆಡಳಿತ ಕೂಡ ಇದಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮರಳು ತೆಗೆಯುವ ನದಿ ಕಡಿರುದ್ಯಾವರ ಗ್ರಾಮ.ಪಂ.ವ್ಯಾಪ್ತಿಗೆ ಸೇರಿದ್ದಾಗಿದೆ. ಇತ್ತ ಇಂದಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಚ್ಛಾ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು ಸದ್ರಿ ರಸ್ತೆಗಳಿಗೆ ಹೊಳೆಯಿಂದ ಚರಲ್ ಹಾಕಲು ಅನುಮತಿಯನ್ನು ಪಂ. ಲಿಖಿತ ಅನುಮತಿ ನೀಡಿದೆ.
ಲಾರಿ, ಟಿಪ್ಪರ್ಗಳಲ್ಲಿ ಮರಳು ಸಾಗಾಟ ಮಾಡಿರುವುದರಿಂದ ಇಲ್ಲಿನ ರಸ್ತೆಯೆಲ್ಲಾ ಹಾಳಾಗಿ ಹೋಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ಅವರು, ಇನ್ನು ಮುಂದೆ ಯಾವುದೇ ವಾಹನ ಬರದ ಹಾಗೆ ಇಲ್ಲಿ ಬೇಲಿ ಹಾಕಿ. ಒಂದೊಮ್ಮೆ ಬಂದರೆ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.