ಕುಂದಾಪುರ, ಸೆ 30: ನವರಾತ್ರಿಯ ಸಮಯ ಹಲವಾರು ಹುಲಿವೇಷಗಳ ತಂಡ ರಸ್ತೆಗಿಳಿಯುತ್ತದೆ. ಅಬ್ಬರದ ಹೆಜ್ಜೆಗಾರಿಕೆಯಿಂದ ಈ ಹುಲಿವೇಷಧಾರಿಗಳು ಜನರ ಮನರಂಜಿಸುತ್ತಾರೆ. ನವರಾತ್ರಿ ಹಬ್ಬದ ಸವಿಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುವುದು ಇದೇ ಮಾರ್ನೆಮಿ ಹುಲಿಗಳು. ಇದರಲ್ಲಿ ಕುಂದಾಪುರದ ಹುಲಿಗಳು ಕೂಡ ಯಾರಿಗೂ ಕಮ್ಮಿ ಇಲ್ಲ.
ಅಳಿವಿನಂಚಿನಲ್ಲಿರುವ ಕುಂದಾಪುರದ ಹುಲಿ ಕುಣಿತವನ್ನ ಪುನಃ ಸಂಘಟಿಸುವಲ್ಲಿ ಕುಂದಾಪುರದ ಕಲಾ ಕ್ಷೇತ್ರ ವಿಶೇಷ ಮುತುವರ್ಜಿವಹಿಸಿ ಪ್ರತಿವರ್ಷ ಹುಲಿಕುಣಿತವನ್ನು ಈ ಭಾಗದಲ್ಲಿ ಆಯೋಜಿಸುತ್ತಿದೆ. ನವರಾತ್ರಿಯ ನವದಿನಗಳಲ್ಲಿ ಕುಂದಾಪುರದ ಭಾಗದಲ್ಲಿ ಹುಲಿಗಳ ಅಬ್ಬರ ಜೋರಾಗಿರುತ್ತದೆ. ತಾಸೆಯ ಸದ್ದಿಗೆ ಈ ಭಾಗದ ಹುಲಿಗಳು ಗತ್ತಿನಿಂದ ಹೆಜ್ಜೆ ಹಾಕಿ ನೋಡುಗರ ಗಮನಸೆಳೆಯುತ್ತದೆ. ಈ ಹಿಂದೆ ಸುಂಬ, ಕೊರಗ, ರಾಜೀವ ಮತ್ತು ನೀಲ ಇವರ ಹುಲಿ ವೇಷಗಳು ಕುಂದಾಪುರದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಕಲಾಕ್ಷೇತ್ರ ಸಂಘಟನೆಯವರು ಇದೀಗ ಕುಂದಾಪುರದಲ್ಲಿ ಹುಲಿಕುಣಿತಕ್ಕೆ ಗತ್ತಿನಿಂದ ಹೆಜ್ಜೆ ಹಾಕುತ್ತಿದ್ದಾರೆ. ನವರಾತ್ರಿಯ ನವದಿನಗಳಲ್ಲಿ ವಿಶೇಷ ಮೆರಗು ನೀಡುತ್ತಿದ್ದಾರೆ.