ಶಿರ್ವ, ಆ 01 : ಶಿರ್ವ ಸಮೀಪದ ಕುತ್ಯಾರಿನ ನರ್ಸ್ ಹೆಝಲ್ ಜೋತ್ಸ್ನಾ ಕ್ವಾಡ್ರಸ್ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನಿಗೂಢವಾಗಿ ಸಾವನಪ್ಪಿದ ಪ್ರಕರಣದ ತನಿಖೆ ಸಂಬಂಧ ಅಲ್ಲಿನ ಪೊಲೀಸರು ನ್ಯಾಯಾಲಯದ ಮುಂದೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ನ್ಯಾಯಾಧೀಶರು ಮರಣೋತ್ತರ ಪರೀಕ್ಷೆಗೆ ಮಂಗಳವಾರ ಆದೇಶಿಸಿದ್ದಾರೆ. ಇದರ ವರದಿ ಮಂಡನೆಯಾದ ಬಳಿಕವಷ್ಟೇ ನ್ಯಾಯಾಧೀಶರು ಅಂತಿಮ ತೀರ್ಮಾನ ತೀರ್ಪು ನೀಡಲಿದ್ದಾರೆ. ಈ ಬಳಿಕ ಆಕೆಯ ಸೊತ್ತುಗಳು ಹಣಕಾಸಿನ ಬಗ್ಗೆ ಲೆಕ್ಕಚಾರ ನಡೆಸಿ, ತೀರ್ಪು ತನಿಖಾ ವರದಿ , ಇನ್ನಿತರ ದಾಖಲೆಗಳೊಂದಿಗೆ ಶವವನ್ನು ಊರಿಗೆ ರವಾನಿಸಲಾಗುತ್ತದೆ.
ಇನ್ನೊಂದೆಡೆ ಸೌದಿ ಅರೇಬೀಯಾದಲ್ಲಿ ಶುಕ್ರವಾರ ಮತ್ತು ಶನಿವಾರ ವಾರದ ರಜೆ ಇದ್ದು ಗುರುವಾರ ಮಧ್ಯಹ್ನದಿಂದಲೇ ಸರಕಾರಿ ಕಚೇರಿಗಳಲ್ಲಿ ಕೆಲಸಗಳು ನಡೆಯುವುದಿಲ್ಲ. ಹೀಗಿರುವಾಗ ಮರಣೋತ್ತರ ಪರೀಕ್ಷೆ , ವರದಿ ಸಲ್ಲಿಕೆ , ತನಿಖೆ ಎಲ್ಲದಕ್ಕೂ ಬುಧವಾರ ಹೊರತುಪಡಿಸಿದರೆ ಭಾನುವಾರ , ಸೋಮವಾರದವರೆಗೂ ಕಾಯಬೇಕಾಗಿದೆ. ಇದನ್ನು ನ್ಯಾಯಾಧೀಶರು ಪರಿಶೀಲಿಸಿ ತೀರ್ಪು ನೀಡಬೇಕಿದೆ ವಾರದ ರಜೆಯಿಂದ ತನಿಖಾ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ.