ಸುಳ್ಯ, ಆ 1: ಸುಳ್ಯ ತಾಲೂಕಿನಲ್ಲಿ ಆನೆಗಳ ಹಾವಳಿ ಮುಂದುವರೆದಿದ್ದು, ರೈತರು ಕಂಗಾಲಾಗಿದ್ದಾರೆ. ಗಡಿಭಾಗದ ಕೊಡಗಿನ ಮಾಪಳಕಜೆ ವಿಶ್ವನಾಥ ಹಾಗೂ ಅಣ್ಣು ಪೂಜಾರಿ ಎಂಬರ ಕೃಷಿ ತೋಟಕ್ಕೆ ದಾಳಿ ನಡೆಸಿವೆ. ಅಡಿಕೆ ಮರ, ಬಾಳೆ, ತೆಂಗಿನ ಮರ ಸೇರಿದಂತೆ ಇತರ ಕೃಷಿ ಬೆಳೆಗಳನ್ನು ಕಾಡಾನೆಗಳು ದಾಳಿ ಇಟ್ಟು ನಾಶ ಮಾಡಿವೆ. ಪರಿಣಾಮ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.
ಅಣ್ಣು ಪೂಜಾರಿ ಅವರ ಕುಟುಂಬದವರು ಭೂಮಿಯನ್ನು ಲೀಸ್ಗೆ ನೀಡಿ ಮೈಸೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಆನೆ ದಾಳಿ ನಡೆದಿದೆ. ವಿಶ್ವನಾಥ ಅವರ ಮನೆಯಿಂದ ಎರಡು ಮೂರು ಕಿ.ಮೀಟರ್ ದೂರದಲ್ಲಿರುವ ತೋಟಕ್ಕೆ ಆನೆ ದಾಳಿ ನಡೆದಿದೆ. ಇದೀಗ ದ.ಕ. ಕೊಡಗಿನ ಗಡಿಭಾಗದ ಜನರು ಆನೆ ದಾಳಿಯಿಂದ ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.