ಬಂಟ್ವಾಳ, ಸೆ 30: ಪ್ರತಿಯೊಂದು ವಿಷಯದಲ್ಲೂ ಜಾತಿ-ಧರ್ಮ ಎಂದು ವಿಭಜಿಸಿ ನೋಡುವ ಇಂದಿನ ಸಮಾಜದಲ್ಲಿ ಲೆವಿನ್ ಸಮೂಹ ಸಂಸ್ಥೆಯ ಮಾಲಕರು ಎಲ್ಲ ಜಾತಿ-ಧರ್ಮದ ಕಾರ್ಮಿಕರನ್ನು ಹಾಗೂ ಅವರ ಬಂಧು-ಬಳಗವನ್ನು ಒಂದೇ ಸೂರಿನಡಿ ಒಟ್ಟು ಸೇರಿಸಿ ವಿಶಿಷ್ಟ ಮಾದರಿಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಸಿದರು.
ತಮ್ಮ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಹಾಗೂ ಕಾರ್ಮಿಕರ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಶ್ಲಾಘಿಸಿದರು.
ಬಂಟ್ವಾಳ ಬೈಪಾಸಿನ ಲೆವಿನ್ ಸಮೂಹ ಸಂಸ್ಥೆಗಳ ವತಿಯಿಂದ ನಡೆದ ಆಯುಧ ಪೂಜೆ, ಕಾರ್ಮಿಕರ ಸುರಕ್ಷತಾ ಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ಸಾಮರಸ್ಯ, ಸಹಿಷ್ಣುತೆ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಹಬ್ಬಗಳ ಆಚರಣೆಯ ಮೂಲಕವಾದರೂ ಸಮಾಜದಲ್ಲಿ ಸುಭಿಕ್ಷೆ ನೆಲೆಸುವ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಆಶಿಸಿದರು.
ಇದೇ ವೇಳೆ ಮಾತನಾಡಿದ ಲೆವಿನ್ ಸಮೂಹ ಸಂಸ್ಥೆಗಳ ಮುಖ್ಯಸ್ಥ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಕಾರ್ಮಿಕರು ಕೇವಲ ಸಂಸ್ಥೆಯ ಕೆಲಸಗಾರರಾಗಿರದೆ, ನಮ್ಮ ಕುಟುಂಬದ ಸದಸ್ಯರಿದ್ದಂತೆ. ಕಾರ್ಮಿಕರಿಂದಲೇ ಸಂಸ್ಥೆಯ ಸರ್ವತೋಮುಖ ಅಭಿವೃದ್ದಿ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರೇ ಸಂಸ್ಥೆಯ ಅಭಿವೃದ್ದಿ ಮೂಲ ಕಾರಣೀಕರ್ತರು. ಕಾರ್ಮಿಕರನ್ನು ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯ ಎಂದು ಬಗೆದು ಅವರ ಎಲ್ಲಾ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮುಖ್ಯಸ್ಥರ ಮಾತೃಶ್ರೀ ಶ್ರೀಮತಿ ಮೋನಿಕಾ ರೋಡ್ರಿಗಸ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಬಂಟ್ವಾಳ ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಜಿ.ಪಂ. ಸದಸ್ಯರಾದ ಕೆ.ಕೆ. ಶಾಹುಲ್ ಹಮೀದ್, ಬಿ. ಪದ್ಮಶೇಖರ್ ಜೈನ್, ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರಾದ ಬಿ. ವಾಸು ಪೂಜಾರಿ, ಗಂಗಾಧರ್, ಮಾಜಿ ಸದಸ್ಯ ಎಪ್ರಿಯಮ್ ಸಿಕ್ವೇರಾ, ಮೆಸ್ಕಾಂ ಅಧೀಕ್ಷಕ ಮಂಜಪ್ಪ, ಕೆಥೋಲಿಕ್ ಸಭಾ ಸಮಿತಿಯ ಅಧ್ಯಕ್ಷ ಸ್ಟ್ಯಾನಿ ಲೋಬೊ, ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ವಿಠಲ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.