ಮಂಗಳೂರು, ಜು 31: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲು ಎಂಬಲ್ಲಿನ ಮನೆಯ ಹಟ್ಟಿಯಿಂದ ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಬಜ್ಪೆ ನಿವಾಸಿ ನಿಸಾರುದ್ದೀನ್ ಯಾನೆ ನಿಸಾರ್ ಯಾನೆ ಪಾರಿವಾಳ ನಿಸಾರ್ ಎಂದು ಗುರುತಿಸಲಾಗಿದೆ.
ಜುಲೈ ೧೭ ರಂದು ಬೆಳಿಗ್ಗಿನ ಜಾವ 03.30ರ ಸುಮಾರಿಗೆ ಮೂಡುಶೆಡ್ಡೆ ಬೈಲು ಎಂಬಲ್ಲಿನ ನಿವಾಸಿ ಪುರುಷೋತ್ತಮ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಗಳನ್ನು ಟಾಟಾ ಸುಮೋದಲ್ಲಿ ಬಂದ ದನಗಳ್ಳರು ಮನೆಯವರನ್ನು ಹೆದರಿಸಿ 2 ದನಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಇಮ್ರಾನ್ ಯಾನೆ ಕುಟ್ಟ ಇಮ್ರಾನ್ ಮತ್ತು ಉಮ್ಮರ್ ಫಾರೂಕ್ ಎಂಬವರನ್ನು ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರಿಂದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಮುಂದುವರೆದಿದೆ.