ವಿಟ್ಲ, ಜು 31: ಬೆಳಗಾದ್ರೆ ಸಾಕು ಶಾಲಾ ಕಾಲೇಜುಗಳತ್ತ ತೆರಳೋ ವಿದ್ಯಾರ್ಥಿಗಳು, ಪ್ರತಿನಿತ್ಯ ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಹಿರಿಯುರು, ಅಡುಗೆ ಕೋಣೆಯ ಕೆಲಸ ಕಾರ್ಯಗಳಲ್ಲೇ ನಿರತರಾಗುತ್ತಿದ್ದ ಮಹಿಳೆಯರು, ಮನೆಯಲ್ಲಿ ಹಾಯಾಗಿ ಇರುತ್ತಿದ್ದ ವೃದ್ಧರು, ಹೀಗೆ ಯಾರನ್ನೂ ಬಿಡದೇ ಪ್ರತಿಯೊಬ್ಬರು ಕೆಸರು ಗದ್ದೆಗಿಳಿದು ಸಂಭ್ರಮಿಸಿದ್ದು, ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಕುಕ್ಕಾಜೆಯಲ್ಲಿ. ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವತಿಯಿಂದ ಧರ್ಮಕ್ಷೇತ್ರದ ಭಕ್ತಾಧಿಗಳಿಗಾಗಿ ಒಂದು ದಿನದ ಕೆಸರು ಗದ್ದೆ ಕ್ರೀಡಾಕೂಟ ‘ಗಾದ್ಯಾಂತ್ ಗಮ್ಮತ್’ ಕಾರ್ಯಕ್ರಮ ಆಯೋಜಿಸಲಾಯಿತು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ತುಳು ಭಾಷೆ ಹೃದಯವನ್ನು ಒಗ್ಗೂಡಿಸುತ್ತದೆ. ತುಳು ಭಾಷೆಯ ಉಳಿವಿನೊಂದಿಗೆ ದೇಶದ ಸಂಸ್ಕೃತಿ ಸಂಸ್ಕಾರದ ರೂಪದಲ್ಲಿ ಸಮಾಜಕ್ಕೆ ಧಾರೆ ಎರೆಯುತ್ತಿದೆ. ಯುವ ಪೀಳಿಗೆ ಹಿರಿಯರ ಸಂಪ್ರದಾಯವನ್ನು ಮರೆಯುವ ಹಂತ ತಲುಪುತ್ತಿದೆ. ಅಂತಹ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ” ಎಂದರು.
ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ತಮ್ಮ ಆಶಿರ್ವಚನದಲ್ಲಿ ಮಾತನಾಡಿ, “ಕೆಸರಾಟ ಅಸಾಮಾನ್ಯವಾದುದು. ಕೆಸರು ಗದ್ದೆಯ ಆಟ ಕೇವಲ ಮನೋರಂಜನೆಯ ಆಟವಾಗದೆ, ಅದರ ಜತೆಗೆ ಚರ್ಮ ರೋಗ ದೂರ ಮಾಡುವ ಜೌಷಧಿಯ ಗುಣವನ್ನು ಒಳಗೊಂಡಿದೆ” ಎಂದರು. ಅಲ್ಲದೆ, ದಿನವಿಡಿ ಕೆಸರುಗದ್ದೆಯಲ್ಲಿ ನಡೆಯುವಂತಹ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಇನ್ನು ಇದೇ ಸಂದರ್ಭ ಚರ್ಚ್ ನ ಧರ್ಮ ಗುರುಗಳಾದ ವಂ. ಫಾ. ವಿಶಾಲ್ ಮೋನಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭಾ ಕಾರ್ಯಕ್ರಮದ ಮೊದಲು ಚರ್ಚ್ ವ್ಯಾಪ್ತಿಯ ಭಕ್ತಾಧಿಗಳ 6 ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಳಿಕ ಕೆಸರು ಗದ್ದೆಯಲ್ಲಿ ದಿನವಿಡಿ ವಿವಿಧ ಮನೋರಂಜನಾ ಕ್ರೀಡಾಕೂಟಗಳು ಜರಗಿದವು. ಕಬ್ಬಡ್ಡಿ, ಹ್ಯಾಂಡ್ ಬಾಲ್, ಹಗ್ಗಜಗ್ಗಾಟ, ರಿಲೇ ಹೀಗೆ ತಂಡಗಳ ನಡುವೆ ಪಂದ್ಯಾಟಗಳು ನಡೆದವು. ವೈಯುಕ್ತಿಕವಾಗಿ ವಿವಿಧ ವಿಭಾಗಗಳಲ್ಲಿ ಕೆಸರುಗದ್ದೆ ಓಟ, ಕೆಸರಿನಿಂದ ಭತ್ತ ಹೆಕ್ಕುವುದು, ಪಿರಮಿಡ್ ರಚನೆ, ನೇಜಿ ನೆಡುವುದು ಸೇರಿದಂತೆ ವಿವಿಧ ಕ್ರೀಡೆಗಳು ನಡೆದವು.
ಇನ್ನು ಸದಾ ಅಡುಗೆ ಕೋಣೆಯಲ್ಲೇ ಇರುತ್ತಿದ್ದ ಮಹಿಳೆಯರು ಕೆಸರಿನಲ್ಲಿ ಪಿರಮಿಡ್ ರಚಿಸುವುದು, ಕೆಸರು ಗದ್ದೆಯಲ್ಲಿ ಬಿದ್ದು ಎದ್ದು ಹ್ಯಾಂಡ್ ಬಾಲ್ ಆಟವಾಡೋದು, ಹಗ್ಗಜಗ್ಗಾಟ ಹೀಗೆ ಮಜಾ ಮಾಡಿದರೆ, ಪುಟಾಣಿ ಮಕ್ಕಳು ಕೂಡ ಕೆಸರನ್ನು ಮೆತ್ತಿಸಿಕೊಂಡು ಆಟೋಟಗಳಲ್ಲಿ ಭಾಗವಹಿಸಿದರು. ವೃದ್ಧರಂತೂ 25ರ ಯುವಕರಂತೆ ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಇನ್ನು ತಮ್ಮ ಪತ್ನಿಯನ್ನು ಹಾಳೆಯಲ್ಲಿ ಕುಳ್ಳೀರಿಸಿ ಪತಿರಾಯರು ಎಳೆದೊಯ್ಯುದ್ದ ಪರಿಯಂತೂ ಎಲ್ಲರಿಗೂ ಮಜಾ ನೀಡಿತು.
ಅಂತಿಮವಾಗಿ ಲೈಝಲ್ ಡಿ ಸೋಜ ನಾಯಕತ್ವದ ಫಾತಿಮಾ ಫಂಟರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ಸಂತೋಷ್ ನಾಯಕತ್ವದ ಕೋಟೆತ್ತಡ್ಕ ಟೈಗರ್ಸ್ ತಂಡ ರನ್ನರಪ್ ಆಗಿ ಸಮಾಧಾನಪಟ್ಟುಕೊಂಡಿತು. ಈ ಸಂದರ್ಭ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೋನ್ಸನ್ ಮೊಂತೇರೊ, ಕಾರ್ಯದರ್ಶಿ ವಿಲಿಯಂ ಡಿ’ಸೋಜ, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಲ್ಫ್ ಡಿ ಸೋಜ, ಕುಕ್ಕಾಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ. ಕುಕ್ಕಾಜೆ, ಪತ್ರಕರ್ತ ವಿಲ್ಫ್ರೆಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.