ಮಂಗಳೂರು ,ಜು 31: ಚಿನ್ನಾಭರಣ ಮತ್ತು ದಾಖಲೆಪತ್ರಗಳಿರುವ ಬ್ಯಾಗ್ ನ್ನು ಬಸ್ ನಿಂದ ಎಗರಿಸಿದ ಘಟನೆ ಮಂಗಳೂರು- ಮುಂಬಯಿ ಬಸ್ ನಲ್ಲಿ ನಡೆದಿದೆ. ಬಿಲ್ಲವರ ಥಾಣೆ ಭಿವಂಡಿಯಲ್ಲಿನ ಹೊಟೇಲ್ ಸಾಯಿಪ್ರಸಾದ್ ಫೆನ್ಡೈನ್ ಫ್ಯಾಮಿಲಿ ರೆಸ್ಟೋರೆಂಟ್ನ ಮಾಲೀಕ,ಬಂಟರ ಸಂಘ ಮುಂಬಯಿ ಇದರ ಭಿವಂಡಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ, ಥಾಣೆ ಕಲ್ಯಾಣ್ ಇಲ್ಲಿನ ಶಹಾಡ್ ಪೂರ್ವದ ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಇವರ ಬ್ಯಾಗ್ ಕಳ್ಳತನವಾಗಿದೆ.
ಜು.31ರ ಸೋಮವಾರ ಸಂಜೆ ಮಂಗಳೂರು ಪಿವಿಎಸ್ ಸರ್ಕಲ್ನಿಂದ ಎಸ್ಆರ್ಎಸ್ ಟ್ರಾವೆಲ್ಸ್ ಬಸ್ನಲ್ಲಿ ಮುಂಬಯಿಗೆ ಪ್ರಯಣಿಸಿದ್ದ ವಿಶ್ವನಾಥ ಶೆಟ್ಟಿ ಅವರು ಯಲ್ಲಾಪುರ ಸಮೀಪ ಊಟಕ್ಕಿಳಿದು ಮತ್ತೆ ಬಸ್ಸನ್ನೇರಿ ನಿದ್ರಿಸಿದ್ದರು. ಎಂದಿನಂತೆ ಇಂದು ಬೆಳಿಗ್ಗೆ ಬಸ್ ನವಿಮುಂಬಯಿ ಅಲ್ಲಿನ ವಾಶಿಗೆ ತಲುಪಿದ್ದು ಇಳಿಯುವ ವೇಳೆ ತನ್ನ ಸೀಟಿನ ಮೇಲಿರಿಸಿದ ಹ್ಯಾಂಡ್ಬ್ಯಾಗ್ ತೆಗೆಯಲೆತ್ನಿಸಿದ್ದಾಗ ಬ್ಯಾಗ್ ಮಾಯವಾಗಿರುವುದು ಗಮನಕ್ಕೆ ಬಂದಿದೆ.
ಪತ್ನಿ ಮಂಗಳೂರಿನಲ್ಲಿ ಸರಿಪಡಿಸಲು ನೀಡಿದ್ದ ಬ್ಯಾಗ್ನಲ್ಲಿದ್ದ 30 ಗ್ರಾಂ ತೂಕದ ಕರಿಯಮಣಿ ಹಾಗೂ ಚಿನ್ನಾಭರಣ ಮತ್ತು ಜಾಗದ ದಾಖಲೆಪತ್ರಗಳಿದ್ದವು ಎನ್ನಲಾಗಿದೆ. ತಕ್ಷಣ ವಿಷಯವನ್ನು ಬಸ್ ಚಾಲಕ ಸೇಸಪ್ಪ ಅವರ ಗಮನಕ್ಕೆ ತಂದು ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸಿ ವಾಶಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ. ಬಸ್ ವಿರಾರೋಡ್ಗೆ ತೆರಳುತ್ತಿದ್ದು ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ವಿರಾರೋಡ್ನಲ್ಲಿ ಇಳಿಯುವವರಿದ್ದರೂ ಪನ್ವೇಲ್ನಲ್ಲೇ ಇಳಿದಿರುವ ಬಗ್ಗೆ ಬಸ್ ನಿರ್ವಹಕ ತಿಳಿಸಿದ ಮಾಹಿತಿ ಪ್ರಕಾರ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಬಸ್ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿದ್ದರೂ ಈ ಬಸ್ನಲ್ಲಿ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿರಲಿಲ್ಲ ಎಂದೂ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.