ಮಂಗಳೂರು, ಜು 31:ಮೀನುಗಾರಿಕಾ ರಜೆ ಮುಕ್ತಾಯವಾಗಿದ್ದು, ಆ. 1 ರಿಂದ ಹೊಸ ಮೀನುಗಾರಿಕೆ ಋತು ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ಮೀನುಗಾರರು ಮತ್ತೆ ಕಡಲಿಗೆ ಇಳಿಯಲು ಸಿದ್ದತೆ ನಡೆಸುತ್ತಿದ್ದಾರೆ. 60 ದಿನಗಳ ಸುದೀರ್ಘ ರಜೆಯ ಬಳಿಕ ಆಳ ಸಮುದ್ರ ಮೀನುಗಾರಿಕೆ ಆರಂಭಗೊಳ್ಳಲಿದೆ.
ಇನ್ನು ಈ ಬಾರಿಯ ಮುಂಗಾರು ಪ್ರಬಲವಾಗಿದ್ದು, ಸಮುದ್ರ ಪ್ರಕ್ಷುಬ್ದ ಗೊಂಡಿತ್ತು. ಇದರಿಂದ ನಾಡದೋಣಿ ಮೀನುಗಾರಿಕೆ ಕೂಡಾ ತೊಂದರೆಯಾಗಿತ್ತು. ಇನ್ನು ಕೂಡಾ ಸಮುದ್ರ ಶಾಂತವಾಗದಿರುವ ಹಿನ್ನಲೆಯಲ್ಲಿ ಎಲ್ಲ ಬಗೆಯ ಮೀನುಗಾರಿಕೆ ಬೋಟುಗಳು ಆ.1 ರಿಂದಲೇ ಮೀನುಗಾರಿಕೆಗೆ ತೆರಳುವುದು ಸಾಧ್ಯವಿಲ್ಲ. ಆದರೆ ಶೇ.10ರಿಂದ 20ರಷ್ಟು ಬೋಟುಗಳು ಮಾತ್ರ ಮೀನುಗಾರಿಕೆಗೆ ನಡೆಸಲು ಸಿದ್ಧತೆ ಕೈಗೊಂಡಿವೆ. ಉಳಿದ ಬೋಟುಗಳು ಮುಂದಿನ ಒಂದು ವಾರದೊಳಗೆ ಕಡಲಿಗಿಳಿಯುವ ಸಾಧ್ಯತೆ ಇದೆ.
ಎರಡು ತಿಂಗಳಿನಿಂದ ರಜೆಯಲ್ಲಿದ್ದ ಮೀನುಗಾರರು ಬೋಟ್ಗಳ ನವೀಕರಣೆ, ದುರಸ್ತಿ ಕೆಲಸಗಳು ಮತ್ತು ಬಲೆಗಳನ್ನು ಸರಿಪಡಿಸುವ ಕೆಲಸಗಳನ್ನು ಭರದಿಂದ ಪೂರ್ಣಗೊಳಿಸಿ ಬೋಟುಗಳು ಈಗ ಧಕ್ಕೆಯಲ್ಲಿ ಲಂಗರು ಹಾಕಿ, ಮೀನುಗಾರಿಕೆಗೆ ತೆರಳಲು ಸನ್ನದ್ಧವಾಗಿ ನಿಂತಿವೆ.