ಜು 31 :ಈತನ ವಯಸ್ಸು 63,ಈತನಿಗಿದ್ದದ್ದು 5 ಜನ ಗರ್ಲ್ಫ್ರೆಂಡ್ಸ್, ಇವರನ್ನೆಲ್ಲಾ ಮೆಂಟೇನ್ ಮಾಡಲು ಹಿಡಿದ ದಾರಿ ಕಳ್ಳತನ.. ಬರೋಬ್ಬರಿ 2 0ರಾಬರಿ ಕೇಸ್ ಗಳಲ್ಲಿ ಈತನನ್ನು ಬಂಧಿಸಿದಾಗ ಇವನ ಕಹಾನಿ ಕೇಳಿ ಪೊಲೀಸರೇ ಸುಸ್ತುಬಿದ್ದಿದ್ದರು.
ಬಂಧು ಸಿಂಗ್ ಎಂಬಾತ ಈಗ ದೆಹಲಿ ಪೊಲೀಸರ ಅತಿಥಿ. ಈತ ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದಾನೆ. 63 ವರ್ಷವಾದರೂ ಬ್ಯಾಚುಲರ್ ಆಗಿಯೇ ಜೀವನ ಸಾಗಿಸುತ್ತಿದ್ದ ಬಂಧು ಸಿಂಗ್ ಐದೈದು ಗರ್ಲ್ಫ್ರೆಂಡ್ಗಳನ್ನು ನಿಭಾಯಿಸುತ್ತಿದ್ದ. ಹೇಗೆ ಎಂದರೆ ಕಳ್ಳತನ ಮಾಡಿ. ಬಂಧು ಸಿಂಗ್ ಇತ್ತೀಚಿಗಷ್ಟೇ ದೆಹಲಿಯ ಸರೈ ರೋಹಿಲಾ ಏರಿಯಾದಲ್ಲಿರುವ ಕಾರ್ಖಾನೆಯಲ್ಲಿ ಕಳ್ಳತನ ಮಾಡಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು. ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಕನ್ನ ಹಾಕಿದವನ ಬಗ್ಗೆ ಮಾಹಿತಿ ತಿಳಿದು ಬಂತು ಮತ್ತು 20 ಪ್ರಕರಣಗಳಲ್ಲಿ ಬೇಕಾಗಿದ್ದ ಬಂಧು ಸಿಂಗ್ ನದ್ದೇ ಈ ಕೆಲಸ ಎಂಬುವುದು ಗೊತ್ತಾಯಿತು. ತನಿಖೆ ಕೈಗೆತ್ತಿಕೊಂಡ ದೆಹಲಿ ಪೊಲೀಸರು ಸಿಂಗ್ನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಿದ ವೇಳೆ ಈತನ ಬಳಿ ಇದ್ದ ಹಣ, 2 ಲ್ಯಾಪ್ಟಾಪ್ ಮತ್ತು ಒಂದು ಎಲ್ಇಡಿ ಟಿವಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗರ್ಲ್ಫ್ರೆಂಡ್ಗಳನ್ನು ಎಣಿಸುತ್ತಿದ್ದ ಇತನನ್ನು ಇದೀಗ ಪೊಲೀಸರು ಕಂಬಿಗಳನ್ನು ಎಣಿಸುವಂತೆ ಮಾಡಿದ್ದಾರೆ.