ಮಂಗಳೂರು, ಜು 31: ಕಾಂಕ್ರೀಟ್ ರಸ್ತೆ ಕಾಮಗಾರಿ ಬಳಿಕ ಶಿರಾಡಿ ಘಾಟ್ ಮಾರ್ಗ ವಾಹನಗಳಿಗೆ ಮುಕ್ತವಾಗಿತ್ತು. ಆದರೆಇದು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಶಿರಾಡಿ ಘಾಟ್ 2 ನೇ ಹಂತದ ರಸ್ತೆ ಸುಧಾರಣೆ ಪೂರ್ಣಗೊಂಡ ಬಳಿಕವೂ ಘನ ವಾಹನಗಳಿಗೆ ಮುಂದುವರಿಸಲಾಗಿದ್ದ ನಿರ್ಬಂಧ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಹೀಗಾಗಿ ಆಗಸ್ಟ್ 1 ರಿಂದ ಶಿರಾಡಿ ಮಾರ್ಗವಾಗಿ ಸಂಚರಿಸುವುದಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಶಿರಾಡಿ 2 ನೇ ಹಂತದ ಕಾಮಗಾರಿ ಪೂರ್ನಗೊಂಡು ಜುಲೈ 15 ರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ಅಂತಿಮ ಹಂತದ ಕೆಲಸ ಬಾಕಿ ಉಳಿದ ಕಾರಣ ಘನ ವಾಹನ ಓಡಾಟಕ್ಕೆ ಬಿಟ್ಟರೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧ ಮುಂದುವರಿಸಬೇಕೆ ಬೇಡವೇ ಎನ್ನುವುದನ್ನು ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶಿರಾಡಿ ಘಾಟಿ ಹೆದ್ದಾರಿಯಲ್ಲಿದ್ದ ನಿರ್ಬಂಧ ತೆರವುಗೊಳಿಸಲು ತೀರ್ಮಾನಿಸಿದ್ದಾರೆ.