ಮಂಗಳೂರು, ಸೆ 30: ಬರ್ಕೆ ಫ್ರೆಂಡ್ಸ್.. ಈ ಹೆಸರು ಕರಾವಳಿಯಲ್ಲಿ ಕೇಳದೆ ಇರುವವರು ತೀರಾ ವಿರಳ. ಕೆಲವೇ ಕೆಲವು ಸದಸ್ಯರಿಂದ ಆರಂಭವಾಗಿ ಅಂಬೆಗಾಲಿಡುತ್ತಾ ಬೆಳೆದು ಬಂದ ಬರ್ಕೆ ಫ್ರೆಂಡ್ಸ್ ತಂಡವು ಹುಲಿವೇಷದ ಜೊತೆಗೆ ಬೇರೆ ಬೇರೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂಘಟನೆಯಾಗಿದೆ. ಕರಾವಳಿಯಲ್ಲಿ ಅಬ್ಬರದ ಹುಲಿಕುಣಿತದೊಂದಿಗೆ ತನ್ನದೇ ಆದ ಗತ್ತನ್ನು, ಪ್ರತಿಷ್ಠೆಯನ್ನು ಪಡೆದ ಹೆಮ್ಮೆಯ ತಂಡ ಬರ್ಕೆ ಫ್ರೆಂಡ್ಸ್.
ಮಾರ್ನೆಮಿ ಎಂದೇ ಕರೆಯಲ್ಪಡುವ ಶರನ್ನವರಾತ್ರಿ ಬಂದಾಗ ಕರಾವಳಿಗರಿಗೆ ಥಟ್ಟನೇ ನೆನಪಾಗುವುದು ಹುಲಿವೇಷ. ನವರಾತ್ರಿಯ ಸಮಯ ಮಂಗಳೂರಿನ ಹುಲಿಗಳಿಗೆ ವಿಶೇಷ ಮರ್ಯಾದೆ ಇದೆ. ದಸರಾ ಸಮಯದಲ್ಲಿ ಹಲವಾರು ಹುಲಿಗಳ ತಂಡ ಕುಡ್ಲದ ರಸ್ತೆಗಿಳಿಯುತ್ತವೆ. ದಸರಾದ ಮೆರವಣಿಗೆಗಳಲ್ಲಿ ಅಬ್ಬರದ ಕುಣಿತದೊಂದಿಗೆ ರಂಗು ಮೂಡಿಸುತ್ತವೆ. ಕರಾವಳಿ ಕಡಲಕಿನಾರೆಯಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿರುವ ತಂಡದಲ್ಲಿ ಬರ್ಕೆ ಫ್ರೆಂಡ್ಸ್ ತಂಡವೂ ಒಂದು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮೂರನೇ ಮರ್ಯಾದೆ ಹೊಂದಿ ಪ್ರತಿಷ್ಠೆಯ ಜೊತೆಗೆ ಹೆಗ್ಗಳಿಕೆಗೆ ಪಾತ್ರವಾಗಿರುವ ತಂಡ ಬರ್ಕೆ ಫ್ರೆಂಡ್ಸ್. ಈ ತಂಡದ ತಾಸೆಯ ಸದ್ದಿಗೆ, ಅಬ್ಬರದ ಹೆಜ್ಜೆಗಾರಿಕೆಗೆ ಇಲ್ಲಿ ತಲೆದೂಗದವರು ಯಾರು ಇಲ್ಲ. ಅಂತಹ ಅದ್ಭುತವಾದ ಹುಲಿಕುಣಿತ ಬರ್ಕೆ ಫ್ರೆಂಡ್ಸ್ ತಂಡದವರದು.
ದೈವೀ ಶಕ್ತಿಯನ್ನು ಹೊಂದಿರುವ ಹುಲಿಕುಣಿತದಲ್ಲಿ ಹುಲಿವೇಷ ಹಾಕುವವರ ಸಂಖ್ಯೆ ವರ್ಷ ವರ್ಷವೂ ಹೆಚ್ಚಾಗುತ್ತಿದ್ದು, ಹುಲಿ ತಂಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸುಮಾರು 50 ಕ್ಕೂ ಮಿಕ್ಕಿ ಹುಲಿವೇಷದ ತಂಡಗಳು ಮಂಗಳೂರಿನಲ್ಲಿದೆ. ಈ ತಂಡಗಳಲ್ಲಿ ಬರ್ಕೆ ಫ್ರೆಂಡ್ಸ್ ತಂಡವು ತನ್ನದೇ ಆದ ಗತ್ತು, ಗೈರತ್ತಿನಿಂದ ಕರಾವಳಿಯಾದ್ಯಂತ ಪ್ರಚಲಿತದಲ್ಲಿದೆ.
ಕಳೆದ 25 ವರುಷಗಳಿಂದ ತನ್ನದೇ ಆದ ವಿಶಿಷ್ಟ ಹಾವಭಾವ, ವೇಷಭೂಷಣ, ಅಬ್ಬರದ ತಾಸೆಯ ಸದ್ದು, ಆರ್ಭಟದ ಹೆಜ್ಜೆಗಾರಿಕೆ, ಗತ್ತು ಗೈರತ್ತಿನ ನಲಿಕೆಯಿಂದ ಪ್ರತಿಷ್ಠೆ ಪಡೆದು, ಸಾಕಷ್ಟು ಹೆಸರು ಮಾಡಿರುವ ಹುಲಿವೇಷದ ತಂಡಗಳಲ್ಲಿ ಮಂಗಳೂರಿನ ಬರ್ಕೆ ಫ್ರೆಂಡ್ಸ್ ತಂಡವೂ ಒಂದು.