ಬಂಟ್ವಾಳ, ಜು 30: ಫರಂಗಿಪೇಟೆಯಲ್ಲಿ ಮಹಿಳೆಯೊಬ್ಬರು ಪರಿಚಿತನಾಗಿದ್ದ ಬೇರೆ ಕೋಮಿನ ಯುವಕನೊಂದಿಗೆ ಮಾತನಾಡಿ , ಆತನ ಕಾರಿನಲ್ಲಿ ಕುಳಿತು ಪ್ರಯಾಣಿಸಲು ಮುಂದಾದಾಗ ಸ್ಥಳೀಯರು ತಡೆದ ಘಟನೆ ಜು.29 ರ ಭಾನುವಾರ ನಡೆದಿದೆ.
ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಸೇರಿ ಅವರನ್ನು ತಡೆದು ನಿಲ್ಲಿಸಿದ ಮಾಹಿತಿ ಅರಿತ ಪೊಲೀಸರು, ಸ್ಥಳಕ್ಕೆ ಧಾವಿಸಿ ಬಂದು, ಬಲ ಪ್ರಯೋಗಿಸಿ ಗುಂಪನ್ನು ಚದುರಿಸಿದರು. ಮಹಿಳೆಯು ಪ್ರಸ್ತುತ ಉಡುಪಿಯಲ್ಲಿ ವಾಸ್ತವ್ಯವಿದ್ದು, ಔಷದಕ್ಕಾಗಿ ಇಲ್ಲಿಗೆ ಬಂದಿದ್ದರು. ತನ್ನ ಹುಟ್ಟೂರಿನ ಪರಿಚಿತ ವ್ಯಕ್ತಿಯಲ್ಲಿ ಮಾತನಾಡಿ, ಆತನ ಕಾರಿನಲ್ಲಿ ಕುಳಿತಾಗ ಸ್ಥಳೀಯರು ಅಪಾರ್ಥ ಕಲ್ಪಿಸಿದ್ದು, ಈ ಅವಾಂತರಕ್ಕೆ ಕಾರಣವಾಗಿತ್ತು. ಘಟನೆ ಬಳಿಕ ಮಹಿಳೆ ಮತ್ತು ಯುವಕನನ್ನು ಪ್ರತ್ಯೇಕವಾಗಿ ಕಳುಹಿಸಿಕೊಡಲಾಯಿತು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ತಾನು ಪರಿಚಿತ ಮಹಿಳೆಯೊಂದಿಗೆ ಮಾತನಾಡುತ್ತಿದ್ದಾಗ ಗುಂಪೊಂದು ತನಗೆ ಹಲ್ಲೆ ನಡೆಸಿದೆ ಎಂದು ಮಹಿಳೆಯ ಜತೆ ಮಾತನಾಡಿದ್ದ ಕುಂದಾಪುರ ನಿವಾಸಿ ಸುರೇಶ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.