ಕುಂದಾಪುರ, ಜು 30: ಕುಂದಾಪುರದ ಉಪ್ಪುಂದ ಕರ್ಕಿಕಳಿ ಬಳಿ ಸಮುದ್ರದಲ್ಲಿ ದೋಣಿಯೊಂದು ಮಗುಚಿ ಮೀನುಗಾರರು ಅಪಾಯದಿಂದ ಪಾರಾದ ಘಟನೆ ಜು 29 ರ ಭಾನುವಾರ ನಡೆದಿದೆ. ಮಂಜುನಾಥ ಖಾರ್ವಿ, ಪಾಂಡುರಂಗ ಖಾರ್ವಿ, ರವೀಂದ್ರ ಖಾರ್ವಿ ಮತ್ತು ಸುಂದರ ಮೊಗವೀರ ಅಪಾಯದಿಂದ ಪಾರಾದ ಮೀನುಗಾರರು. ಶ್ರೀ ಮಹಾಸತಿ ಕೃಪಾ ಹೆಸರಿನ ನಾಡದೋಣಿಯಲ್ಲಿ ನಾಲ್ವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಏಕಾಏಕಿ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸಿ, ದೋಣಿ ಪಲ್ಟಿಯಾಗಿದೆ. ತಕ್ಷಣ ದೋಣಿಯಲ್ಲಿದ್ದ ಮೀನುಗಾರರು ನೀರಿಗೆ ಧುಮುಕಿದ್ದಾರೆ. ಘಟನೆ ಬೆಳಕಿಗೆ ಬಂದ ತಕ್ಷಣ ಸ್ಥಳೀಯ ಮೀನುಗಾರರ ಸಹಾಯದಿಂದ ನಾಲ್ವರು ಮೀನುಗಾರರನ್ನು ರಕ್ಷಿಸಲಾಗಿದೆ.
ಬಳಿಕ ಸುಮಾರು 50ಕ್ಕೂ ಅಧಿಕ ಮೀನುಗಾರರು ಪಲ್ಟಿಯಾದ ದೋಣಿಯನ್ನು ದಡಕ್ಕೆ ತರಲು ಯಶಸ್ವಿಯಾದರು. ಘಟನೆಯಿಂದಾಗಿ ದೋಣಿಯ ಇಂಜಿನ್ ಒಡೆದು ಅಪಾರ ಹಾನಿಯಾಗಿದೆ. ಮೀನು ಹಿಡಿಯುವ ಬಲೆ ಕೂಡಾ ಸಮುದ್ರ ಪಾಲಾಗಿದೆ. ಹೀಗಾಗಿ ಸುಮಾರು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.