ಬಸ್ರೂರು, ಜು 30: ಐತಿಹಾಸಿಕ ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿ 2 ಲಕ್ಷ ಮೌಲ್ಯದ ಮುಖವಾಡ ಕಳವುಗೈದಿದ್ದಾರೆ. ದೇವಸ್ಥಾನದ ಹಿಂಭಾಗದ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ದೇವಿಗೆ ಹಾಕಲಾಗಿದ್ದ ಸುಮಾರು ಎರಡು ಕೆಜಿ ಬೆಳ್ಳಿಯ ಮುಖವಾಡ ಮತ್ತು ಗಣಪತಿಗೆ ಹಾಕಲಾಗಿದ್ದ ಎರಡು ಕೆಜಿ ಬೆಳ್ಳಿ ಮುಖವಾಡ ಕಳವುಗೈದಿದ್ದಾರೆ.
ಜು .29 ರ ಭಾನುವಾರ ರಾತ್ರಿ ಸುಮಾರು 1 ಗಂಟೆಗೆ ಒಳ ನುಗ್ಗಿದ್ದ ಕಳ್ಳರು ದೇವಸ್ಥಾನದ ಪಕ್ಕದಲ್ಲಿ ಅರ್ಚಕರು ಮಲಗಿದ್ದ ಕೋಣೆಗೆ ಹೊರಗಿನಿಂದ ಚಿಲಕ ಹಾಕಿ ಬಂಧಿಸಿ ಕಳ್ಳತನವೆಸಗಿದ್ದಾರೆ. ದೇವಸ್ಥಾನದ ಪ್ರಧಾನ ಗರ್ಭಗುಡಿಕ್ಕೂ ಪ್ರವೇಶಿಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದಾಗ ಸೈರನ್ ಮೊಳಗಿ ಕಳ್ಳರು ಪರಾರಿಯಾಗಿದ್ದಾರೆ. ಸೈರನ್ ಶಬ್ದಕ್ಕೆ ಎಚ್ಚೆತ್ತ ಅರ್ಚಕರು ಮತ್ತು ಸಿಬ್ಬಂದಿಗಳು ಹೊರಗಿನಿಂದ ಚಿಲಕ ಹಾಕಿದ್ದ ಹಿನ್ನಲೆಯಲ್ಲಿ ಹೊರಕ್ಕೆ ಬರಲಾಗದೆ ಅಸಹಾಯಕರಾಗಿದ್ದಾರೆ.
ಸೈರನ್ ಸದ್ದಿಗೆ ಎಚ್ಚೆತ್ತ ಗ್ರಾಮಸ್ಥರು ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ, ಆದರೆ ಚಲಾಕಿ ಚೋರರು ದೇವಸ್ಥಾನದ ಹಿಂಭಾಗದ ಅನ್ಗಳ್ಳಿ ಸಂಪರ್ಕ ರಸ್ತೆಯಿಂದ ಪರಾರಿಯಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇನ್ನು ಸ್ಥಳಕ್ಕೆ ಧಾವಿಸಿ ಬಂದ ಕಂಡ್ಲೂರು ಪೊಲೀಸರು ಪರಿಶೀಲನೆ ನಡೆಸಿ ಸಿಸಿ ಟಿವಿ ಪರಿಶೀಲಶಿದ್ದಾರೆ. , ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.