ಕುಂದಾಪುರ, ಜು 30: ಕೇರಳ ಮಾಂತ್ರಿಕನೊಬ್ಬನಿಂದ ಜಾಗಕ್ಕೆ ಮಾಟ ಮಾಡಲಾಗಿದ್ದು, ಜಾಗ ಖಾಲಿಮಾಡದಿದ್ದರೆ ರಕ್ತಕಾರಿ ಸಾಯುತ್ತಾರೆ ಎನ್ನುವ ಸ್ಥಳೀಯ ಜ್ಯೋತಿಷಿಯೊಬ್ಬರ ಭವಿಷ್ಯದಿಂದ ಗ್ರಾಮವನ್ನು ತೊರೆದಿದ್ದ ಎನ್,ಆರ್.ಪುರದ ಸಿಗುವಾನಿ ವೃತ್ತದ ಸಮೀಪ ಕಳೆದ 15 ವರ್ಷಗಳಿಂದ ವಾಸವಿದ್ದ 60 ಅಲೆಮಾರಿ ಕುಟುಂಬಗಳ ಪೈಕಿ ಒಂದು ಕುಟುಂಬ ಕುಂದಾಪುರದ ಕೋಟೇಶ್ವರ ಎಂಬಲ್ಲಿ ಪಾಳು ಭೂಮಿಯಲ್ಲಿ ವಾಸ್ತವ್ಯ ಹೂಡಿರುವುದು ಪತ್ತೆಯಾಗಿದ್ದಾರೆ. ಉಳಿದ ಕುಟುಂಬಗಳಲ್ಲಿ ಕೆಲವು ಕೇರಳ, ಮಂಗಳೂರು, ಬಿಜ್ಜವಳ್ಳಿ ಮೊದಲಾದೆಡೆ ತೆರಳಿರುವುದು ಬೆಳಕಿಗೆ ಬಂದಿದೆ. ಕೋಟೇಶ್ವರದಲ್ಲಿ ವಾಸ್ತವ್ಯ ಹೂಡಿರುವ ಕುಟುಂಬದ ಮುಖ್ಯಸ್ಥ ಗಣೇಶ್ ಹಾಗೂ ಆತನ ಪತ್ನಿ ಲಲಿತಾ ಮತ್ತು ಮೂವರು ಮಕ್ಕಳಾದ ಗೀತಾಂಜಲಿ, ರೂಪಾ ಹಾಗೂ ಮಂಜುನಾಥ ಟೆಂಟ್ ಹಾಕಿ ವಾಸವಿದ್ದಾರೆ.
ಹಕ್ಕಿಪಿಕ್ಕಿಗಳ ಸಮುದಾಯದ ಸುಮಾರು 60 ಕುಟುಂಬಗಳು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಬಿ.ಹೆಚ್.ಕೈಮರ ಎಂಬಲ್ಲಿರುವ ಸಿಗುವಾನಿ ಗ್ರಾಮದಲ್ಲಿ ಕಳೆದ ೧೫ ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಟೆಂಟ್ ಹಾಕಿ ಬದುಕು ಸವೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅವರ ಸಮುದಾಯದಲ್ಲಿ ಕಾರಣವಿಲ್ಲದೇ ಸಾವು ಸಂಭವಿಸುತ್ತಿದ್ದು, ೨೫ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎನ್ನುತ್ತಾರೆ ವಲಸೆ ಬಂದ ಗಣೇಶ್.ಸಿಗುವಾನಿಯಲ್ಲಿ ಸರ್ಕಾರಿ ಭೂಮಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡುವಂತೆ ಸ್ಥಳೀಯ ಮಟ್ಟದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ಸಮುದಾಯದೊಳಗೆ ಸಾವು ಸಂಭವಿಸುತ್ತಿದ್ದು, ಆತಂಕಕ್ಕೀಡಾದ ಕುಟುಂಬಗಳ ಜ್ಯೋತಿಷಿಗಳ ಬಳಿ ಪ್ರಶ್ನೆ ಕೇಳಿದ್ದಾರೆ. ಜಾಗದ ತೊಂದರೆಯಿದ್ದು, ಜಾಗ ಖಾಲಿ ಮಾಡಬೇಕು. ಕೇರಳದ ಮಾಂತ್ರಿಕನೊಬ್ಬನಿಂದ ಜಾಗಕ್ಕೆ ಮಾಟ ಮಾಡಿಸಲಾಗಿದ್ದು, ನಿರಂತರ ಸಾವು ಖಚಿತ. ಎಂದು ತಿಳಿಸಿದ್ದರೆನ್ನಲಾಗಿದೆ. ಇದೇ ಕಾರಣಕ್ಕೆ ಜುಲೈ ೨೬ರಂದು ಕೂಡಾ ಇಬ್ಬರು ಸಾವನ್ನಪ್ಪಿದ್ದು, ಇದರಿಂದ ಆತಂಕಕ್ಕೀಡಾಗಿ ಅಲ್ಲಿಂದ ಜಾಗ ಬಿಟ್ಟು ಹೊರಬಂದಿದ್ದೇವೆ ಎಂದು ಹೇಳುತ್ತಾರೆ ಗಣೇಶ್.
ಗಣೇಶ್ ಹೇಳುವ ಪ್ರಕಾರ, ಈಗಾಗಲೇ ಏಳು ಜನ ಯುವಕರು ಸಾವನ್ನಪ್ಪಿದ್ದು, ಪ್ರಶ್ನೆ ಕೇಳಿದಾಗ ಚಂದ್ರ ಗ್ರಹಣಕ್ಕೆ ಮುಂಚಿತವಾಗಿಯೇ ಜಮೀನನ್ನು ತೊರೆಯಬೇಕು ಇಲ್ಲಾಂದ್ರೆ ಗಂಡಾಂತರ ನಿಶ್ಚಿತ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ತಾವು ಸಾಕಿದ ಜಾನುವಾರುಗಳನ್ನು ಬಿಟ್ಟು ಎಲ್ಲಾ ಕುಟುಂಬಗಳು ವಲಸೆ ಹೋಗಿದ್ದಾರೆ. ಇಷ್ಟರವರೆಗೆ ಎಲ್ಲಿಯೂ ನೆಲೆ ಇಲ್ಲದ ಹಕ್ಕಿಪಿಕ್ಕಿ ಸಮುದಾಯಗಳಿಗೆ ಒಂದುಕಡೆ ನೆಲೆ ನಿಂತು ಸಂಸಾರ ನಡೆಸುವ ಆಸೆಯಿದ್ದರೂ ಕೈಗೂಡುತ್ತಿಲ್ಲ. ಮುಂದೆ ಏನು ಮಾಡಬೇಕು ಎನ್ನುವುದು ತೋಚದಂತಾಗಿದೆ ಎನ್ನುತ್ತಿದೆ ಈ ಕುಟುಂಬ. ಆದರೆ ಇವರ ಮಾತುಗಳನ್ನು ಕೇಳುತ್ತಿದ್ದರೆ ನಿವೇಶನಕ್ಕಾಗಿ ಹಕ್ಕಿಪಿಕ್ಕಿಗಳ ಸಮುದಾಯ ಕೇಳುತ್ತಿರುವ ಜಾಗವನ್ನು ಭೂಮಾಲಕರು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನಗಳು ಮೂಡುವುದು ಖಚಿತ.