ಜು, 30: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಅಧಿನಾಯಕ 94 ರ ಹರೆಯದ ಕರುಣಾನಿಧಿ ಅವರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವ ಕರುಣಾನಿಧಿ ಅವರಿಗೆ ಈ ಹಿಂದೆ ಮನೆಯಿಂದಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಬಳಿಕ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ರಾತ್ರಿ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದರಿಂದ ಅವರ ಕುಟುಂಬಸ್ಥರು ತಡರಾತ್ರಿ ಆಸ್ಪತ್ರೆಗೆ ದೌಡಾಯಿಸಿದ್ದರು. ಹೀಗಾಗಿ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು.
ಆದರೆ ಬಳಿಕ ಕರುಣಾನಿಧಿ ಅವರ ಆರೋಗ್ಯದಲ್ಲಿ ಅಲ್ಪಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಹೇಳಿಕೆ ಆಸ್ವತ್ರೆಯ ವೈದ್ಯರು ಬಿಡುಗಡೆ ಮಾಡಿದೆ.
ಇನ್ನೊಂದೆಡೆ ಮನೆಯ ಹಾಗೂ ಅಸ್ಪತ್ರೆಯ ಹೊರಗೆ ನೂರಾರು ಡಿಎಂಕೆ ಕಾರ್ಯಕರ್ತರು ಜಮಾವಣೆಗೊಳ್ಳುತ್ತಿದ್ದು, ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.