ಬಂಟ್ವಾಳ, ಜು 29: ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ನಡೆಸುತ್ತಿದ್ದ ಆರೋಪಿಯೋರ್ವನನ್ನು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಮೆಲ್ಕಾರ್ ನಲ್ಲಿ ಭಾನುವಾರ ಬಂಧಿಸಿದ್ದಾರೆ. ಬಂಧಿತನನ್ನು ಮೂಲತಃ ಕೊಡಗು ವಿರಾಜಪೇಟೆಯ ಚಾಮರಾಜನಗರ ನಿವಾಸಿ, ಕಲ್ಲಡ್ಕ ಸಮೀಪದ ಕೆ.ಸಿ.ರೋಡುವಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಅಲೀಮ್ ಆಲಿಯಾಸ್ ಮಹಮ್ಮದ್ ಆಲಿ(೩೬) ಎಂದು ಗುರುತಿಸಲಾಗಿದೆ.
ಮಾಣಿ ಕಡೆಯಿಂದ ಬಂಟ್ವಾಳ ಕಡೆಗೆ ಓಮಿನಿ ವಾಹನದಲ್ಲಿ ಅಕ್ರಮವಾಗಿ ಗಾಂಜಾ ವನ್ನು ಮಾರಾಟ ಮಾಡಲು ಸಾಗಿಸಲಾಗುತ್ತಿದ್ದ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕ ಸುನಿಲ್ ನಾಯಕ್ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಮೆಲ್ಕಾರ್ ನಲ್ಲಿ ಕಾರನ್ನು ಪರಿಶೀಲನೆಗೆಂದು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕ ಓಡಿ ಹೋಗಲು ಯತ್ನಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜಿಲ್ಲಾ ಅಪರಾದ ಪತ್ತೆದಳದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಾರಿನಲ್ಲಿ ೨ ಕೆ.ಜಿ. ೧೦೦ ಗ್ರಾಂ ಗಾಂಜಾ ಪತ್ತೆಯಾಗಿದ್ದು, ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಈತನಿಂದ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಓಮಿನಿ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.