ಮಂಗಳೂರು, ಜು 29 :ಕಾಣೆಯಾದ ಮಕ್ಕಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಾಣೆಯಾದ ಮಕ್ಕಳ ಬ್ಯೂರೋವನ್ನು ಸ್ಥಾಪಿಸಲಾಗಿದೆ. ಸಕಾಲದಲ್ಲಿ ಪತ್ತೆ ಹಚ್ಚಿ ಮರಳಿ ಮನೆಗೆ ಸೇರಿಸಲು ವ್ಯವಸ್ಥಿತವಾದ ಜಾಲಬಂಧ ಮತ್ತು ಪರಿಣಾಮಕಾರಿಯಾದ ಕಾರ್ಯತಂತ್ರಗಳನ್ನು ಇದು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣೆಯಾದ ಮಕ್ಕಳ ಬ್ಯೂರೋ ಘಟಕವು ಕರ್ನಾಟಕ ಇಂಟಗ್ರೇಟೆಡ್ ಡೆವೆಲಪ್ಮೆಂಟ್ ಸೊಸೈಟಿ, ಪುತ್ತೂರು ಸಂಸ್ಥೆಯ ಮೂಲಕ 2014 ರ ಜನವರಿಯಲ್ಲಿ ಆರಂಭಗೊಂಡು ಪ್ರಸ್ತುತ ಜಿಲ್ಲಾಧಿಕಾರಿಯವರ ಕಛೇರಿ ಕಟ್ಟಡ 1 ನೇ ಮಹಡಿಯಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಾರ್ಯವೈಖರಿ:
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಂದ18 ವರ್ಷದೊಳಗಿನ ಮಕ್ಕಳ ನಾಪತ್ತೆ ಪ್ರಕರಣಗಳ ಪ್ರಥಮ ವರ್ತಮಾನ ವರದಿ ಹಾಗೂ ಜಿಲ್ಲೆಯಲ್ಲಿ ಸಹಚರರಿಲ್ಲದೆ ಪತ್ತೆಯಾದ ಮಕ್ಕಳ ಮಾಹಿತಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಸಂಗ್ರಹಿಸಿ ಕಾಣೆಯಾದ ಮಕ್ಕಳ ಬ್ಯೂರೋದ ವೆಬ್ಸೈಟ್ www.missingcitizens.org ನಲ್ಲಿ ದಾಖಲಿಸಲಾಗುತ್ತದೆ.(ದೂರವಾಣಿ ಸಂಖ್ಯೆ: 8970301039) ಈ ಮೂಲಕ ಜಿಲ್ಲೆಯಲ್ಲಿ ಕಾಣೆಯಾದ ಹಾಗೂ ಅನಾಥರಾಗಿ ಪತ್ತೆಯಾದ ಮಕ್ಕಳ ಮಾಹಿತಿಯನ್ನು ಅನ್ಯ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಣೆಯಾದ ಮಕ್ಕಳ ಬ್ಯೂರೋ ಸಂಯೋಜಕರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ನಾಪತ್ತೆಯಾದ ಮಕ್ಕಳ ವಿವರಗಳನ್ನು ಅನ್ಯ ಜಿಲ್ಲೆಗಳಲ್ಲಿ ಸಹಚರರಿಲ್ಲದೆ ಪತ್ತೆಯಾದ ಮಕ್ಕಳ ಮಾಹಿತಿಯೊಂದಿಗೆ ಹಾಗೂ ಜಿಲ್ಲೆಯಲ್ಲಿ ಅನಾಥರಾಗಿ ಪತ್ತೆಯಾದ ಮಕ್ಕಳ ಮಾಹಿತಿಯನ್ನು ವಿವಿಧ ಜಿಲ್ಲೆಗಳಲ್ಲಿ ನಾಪತ್ತೆಯಾಗಿರುವ ಮಕ್ಕಳ ವಿವರಗಳೊಂದಿಗೆ ತಾಳೆ ಮಾಡಿ ಪರಿಶೀಲಿಸಲಾಗುತ್ತಿದೆ. ಎರಡೂ ವಿವರಗಳು ತಾಳೆಯಾದಾಗ ಕಾಣೆಯಾದ ಮಕ್ಕಳನ್ನು ಮರಳಿ ಕುಟುಂಬಕ್ಕೆ ಸೇರಿಸಲು ಕ್ರಮವಹಿಸಲಾಗುತ್ತದೆ. ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.