ಸುಬ್ರಹ್ಮಣ್ಯ, ಜು 29: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತನಿಖೆಗೆ ಹಾಜರಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಪರಿಸರದ ನಾಲ್ಕು ಮಂದಿಗೆ ಎಸ್ಐಟಿ , ಸುಬ್ರಹ್ಮಣ್ಯ ಪೊಲೀಸರ ಮೂಲಕ ಜು 29 ರ ಶನಿವಾರ ನೋಟಿಸ್ ಜಾರಿ ಮಾಡಿದೆ.
ಬಂಧನದಲ್ಲಿರುವ ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ತನಿಖಾ ತಂಡದ ಅಧಿಕಾರಿಗಳು ಶುಕ್ರವಾರ ಕೊಲ್ಲಮೊಗ್ರುವಿಗೆ ಬಂದು ಈ ಭಾಗದ ನಾಲ್ಕು ಮಂದಿಯ ಕುರಿತು ಮಾಹಿತಿ ಕಲೆಹಾಕಿದ್ದರು. ಮೋಹನ್ ಚಾಂತಳ ಎಂಬವರ ಮನೆಗೆ ತೆರಳಿ ಅವರ ಕುರಿತು ವಿಚಾರಿಸಿ ತನಿಖೆಗೆ ಬರುವಂತೆ ನೋಟಿಸ್ ನೀಡಿತ್ತು. ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯ ಪೊಲೀಸರ ಮೂಲಕ ಮೋಹನ ಚಾಂತಾಳ, ಯತೀಶ್ ಮೊಗ್ರ, ಯತಿನ್ ಅಂಬೆಕಲ್ಲು, ಕುಮುದಾಕ್ಷ ಜಾಲುಮನೆ ಅವರ ಮನೆಗೆ ತೆರಳಿ ನೋಟೀಸ್ ನೀಡಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಲು ಬೆಂಗಳೂರು ಕಚೇರಿಗೆ ಆಗಮಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಈ ನಾಲ್ವರಲ್ಲಿ ಮೂವರು ಕೃಷಿಕರಾಗಿದ್ದು, ಒಬ್ಬರು ಸರ್ಕಾರಿ ನೌಕರರಾಗಿದ್ದಾರೆ.