ಕುಂದಾಪುರ , ಜು 29: ವಂಡ್ಸೆ ಘಟಿಸುತ್ತಿರುವ ವಿಲಕ್ಷಣ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಳ್ಳತನದ ಉದ್ದೇಶ ಇರಬಹುದು. ಅಥವಾ ಸೈಕೋಪಾತ್ಗಳಾಗಿರಬಹುದು. ಯಾರೂ ಕೂಡಾ ಈ ಬಗ್ಗೆ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ. ಪೊಲೀಸರು ನಿಮ್ಮೊಂದಿಗಿದ್ದಾರೆ. ಗುಮಾನಿ ಇರುವ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಕುತೂಹಲ ಉಂಟು ಮಾಡಿರುವ ಈ ಪ್ರಕರಣವನ್ನು ಪತ್ತೆದಾರಿ ಪ್ರಜ್ಞೆ ಉಪಯೋಗಿಸಿ ಭೇದಿಸೋಣ ಎಂದು ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ದಿನೇಶ ಕುಮಾರ್ ಹೇಳಿದರು.
ವಂಡ್ಸೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ವಿಲಕ್ಷಣ ವಿದ್ಯಮಾನಗಳ ಬಗ್ಗೆ ವಂಡ್ಸೆ ಗ್ರಾಮ ಪಂಚಾಯತ್ನಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂಥಹ ಪ್ರಕರಣವನ್ನು ಭೇದಿಸಲು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ನಿಮ್ಮ ಜೊತೆ ಪೊಲೀಸರು ಇರುತ್ತಾರೆ. ಭಯ ಉಂಟು ಮಾಡುತ್ತಿರುವ ವ್ಯಕ್ತಿ ಕಂಡು ಬಂದಲ್ಲಿ ಯಾವುದೇ ಹಲ್ಲೆಗಳನ್ನು ನಡೆಸದೇ ಪೊಲೀಸರ ವಶಕ್ಕೆ ಒಪ್ಪಿಸಿ. ಈ ಸಂದರ್ಭದಲ್ಲಿ ತಾಳ್ಮೆಯಿಂದ ವ್ಯವಹರಿಸುವುದು ಅತೀ ಮುಖ್ಯ. ಪತ್ತೆದಾರಿ ಪ್ರಜ್ಞೆಯನ್ನು ಉಪಯೋಗಿಸಿ ಆ ವ್ಯಕ್ತಿಗಳನ್ನು ಬಂಧಿಸಬೇಕಾಗುತ್ತದೆ ಎಂದರು.
ಈಗಾಗಲೇ ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದೆ. ಆ ವ್ಯಕ್ತಿಗಳು ಸಿಗುವ ತನಕ ಪೊಲೀಸ್ ಸಿಬ್ಬಂದಿಗಳು ಇಲ್ಲೆ ಇರುತ್ತಾರೆ. ಯಾವುದೇ ಅನುಮಾನಗಳಿದ್ದರೂ ಕೂಡಾ ನಿಮ್ಮ ಬೀಟ್ ಪೊಲೀಸರ ಗಮನಕ್ಕೆ ತನ್ನಿ ಎಂದರು.
ಕರ್ನಾಟಕ ಪೊಲೀಸ್ ವ್ಯವಸ್ಥೆಯಲ್ಲಿ ನಮ್ಮ ಜಿಲ್ಲೆಗೆ ಒಳ್ಳೆಯ ಹೆಸರಿದೆ. ಬೀಟ್ ಪೊಲೀಸ್ ವ್ಯವಸ್ಥೆ ಮಹತ್ವ ಬದಲಾವಣೆ. ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಸಾರ್ವಜನಿಕರೂ ಕೂಡಾ ಬೀಟ್ ವ್ಯವಸ್ಥೆಯಲ್ಲಿ ಸದಸ್ಯರರಾಗಿರುತ್ತಾರೆ. ತಿಂಗಳಿಗೊಮ್ಮೆ ಠಾಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ನಿಮ್ಮಲ್ಲಿಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಉತ್ತಮ ವೇದಿಕೆ ಎಂದರು.
ಈ ಸಂದರ್ಭದಲ್ಲಿ ಅವರು ಪೋಕ್ಸೋ ಕಾಯಿದೆ, ರಸ್ತೆ ಸುರಕ್ಷತೆಯ ಬಗ್ಗೆಯೂ ಕೂಡಾ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಠಾಣಾಧಿಕಾರಿ ಶಿವಕುಮಾರ್, ಗ್ರಾ.ಪಂ.ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಗ್ರಾ.ಪಂ.ಸದಸ್ಯರಾದ ಉದಯ ನಾಯ್ಕ್, ಗುಂಡು ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ಆಶೀರ್ವಾದ್ ಫ್ರೆಂಡ್ಸ್ ಅಧ್ಯಕ್ಷ ಮಹೇಶ ಗಾಣಿಗ, ಮಾತೃಭೂಮಿ ಯುವ ಸಂಘಟನೆ ಅಧ್ಯಕ್ಷ ರಮೇಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಜೇಸಿಐನ ಗೋವರ್ಧನ ಜೋಗಿ, ರಿಕ್ಷಾ ಚಾಲಕ ಮಾಲಕರ ಸಂಘದ ದಿನಕರ ಗಾಣಿಗ, ಪೋಲಿಸ್ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಮೇ ತಿಂಗಳಿಂದಿಚೆಗೆ ವಂಡ್ಸೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಮಹಿಳೆಯರ ಬಟ್ಟೆ ಕಳವು ನೆಡೆಯುತ್ತಿತ್ತು. ಮೊನ್ನೆ ನಾಲ್ಕು ದಿನಗಳಿಂದ ನಿರಂತರವಾಗಿ ಅಡಿಕೆಕೊಡ್ಲು ಮನೆಯೊಂದರ ಹತ್ತಿರ ಅನುಮಾಸ್ಪದ ವ್ಯಕ್ತಿಗಳಿಬ್ಬರು ಕಾಣಿಸಿಕೊಳ್ಳುತ್ತಿದ್ದು, ಮನೆಯವರು ನೋಡುತ್ತಲೇ ಓಡಿ ಹೋಗುತ್ತಿದ್ದರು. ಇದು ನಿರಂತರ ನಾಲ್ಕು ದಿನ ಹಗಲು ವೇಳೆಯೇ ನಡೆಯುತ್ತಿದ್ದು, ಬುಧವಾರ ಸುಮಾರು ೨೦೦ಕ್ಕೂ ಹೆಚ್ಚು ಜನ ಅನುಮಾನಸ್ಪದವಾಗಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗಿದ್ದರು. ಆದರೆ ಅವರು ಕಣ್ಮರೆಯಾಗಿದ್ದರು. ಜನ ಭಯ ಬೀತರಾಗುತ್ತಿದ್ದು ಕಳೆದ ನಾಲ್ಕು ದಿನಗಳಿಂದ ಸ್ಥಳೀಯ ಜನರು ತಂಡಗಳಾಗಿ ಗ್ರಾಮಕ್ಕೆ ಕಾವಲು ಕಾಯಲಾರಂಭಿಸಿದ್ದಾರೆ. ಈ ಹಿನ್ನೆಲೆ ಡಿವೈಎಸ್ಪಿಯವರೇ ಖುದ್ದು ಅಡಿಕೆಕೊಡ್ಲುವಿಗೆ ಬೇಟಿ ನೀಡಿದ್ದಾರೆ. ಆ ವ್ಯಕ್ತಿಗಳು ನಿರಂತರ ಮೂರುದಿನ ಕಾಣಿಸಿಕೊಂಡ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ಕೂಡಾ ನೆರೆದಿದ್ದರು.