ಮಂಗಳೂರು ಜು28: ನಗರದ ಪಾಂಡೇಶ್ವರ ಪೊಲೀಸ್ ಠಾಣೆ ಸಮೀಪವಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ 2 ದನ ಮತ್ತು 1 ಕರುವನ್ನು ಗೋ ಕಳ್ಳರು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಮಂಗಳೂರಿನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಜೇಶ್ವರ ಮಚ್ಚಂಪಾಡಿ ನಿವಾಸಿ ಅಬ್ದುಲ್ಲ ಹುಸೈನ್ ಎಂದು ಗುರುತಿಸಲಾಗಿದೆ.
ಕೊಣಾಜೆ ಕೈರಂಗಳ ಪುಣ್ಯಕೋಟಿ ಅಮೃತಧಾರಾ ಗೋಶಾಲೆಯ ದನ ಕಳವು ಪ್ರಕರಣ ಸೇರಿದಂತೆ, ಮಂಗಳೂರು ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ದನ ಕಳ್ಳತನದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ. ಮಾರುತಿ ರಿಟ್ಜ್ ಕಾರಿನಲ್ಲಿ ಬಂದು ದೇವಸ್ಥಾನದ 2 ದನ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಈತ ಮಂಗಳೂರು ಹಾಗೂ ನೆರೆಯ ಕಾಸರಗೋಡು ಪ್ರದೇಶಗಳಲ್ಲಿ ಅನೇಕ ದನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಜು.5 ರಂದು ನಡೆದಿರುವ ಈ ಘಟನೆಯ ಕುರಿತು ದೇವಾಲಯದ ಸಿಬ್ಬಂದಿ ಜು.25ರಂದು ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಮಂಗಳೂರಿನ ಕೊಣಾಜೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹುಸೈನ್ ವಿರುದ್ಧ ಕಾಸರಗೋಡು ಮತ್ತು ಮಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.