ಚಿತ್ರದುರ್ಗ, ಜು28: ಮೂಢ ನಂಬಿಕೆಯನ್ನು ಧಿಕ್ಕರಿಸುವ ಮೂಲಕ ಚಂದ್ರಗ್ರಹಣದಂದೇ ಮದುವೆಯಾಗಿ, ಹೊಸ ಜೀವನಕ್ಕೆ ಕಾಲಿಡುವ ಮೂಲಕ ನವ ಜೋಡಿಗಳು ಮಾದರಿಯಾಗಿದ್ದಾರೆ.
ಕೋಟೆನಾಡು ಚಿತ್ರದುರ್ಗದ ಮುರುಘಾ ಮಠ ನವಜೋಡಿಗೆ ವಿವಾಹ ಕಾರ್ಯಕ್ರಮ ಏರ್ಪಡಿಸಿ ವಿಶಿಷ್ಟ ಕಾರ್ಯಕ್ರಮ ನಡೆಸಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆಯ ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ಅವರಿಗೆ ಚಂದ್ರಗ್ರಹಣದಂದೇ ಮದುವೆ ಶುಭಕಾರ್ಯ ನಡೆಸಲಾಯಿತು. ಮಾತ್ರವಲ್ಲ, ಇದೇ ವೇಳೆ ನೂರಾರು ಬಾಲಕ, ಬಾಲಕಿಯರು ಹಾಗೂ ಯುವಕರು ಲಿಂಗದೀಕ್ಷೆ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು, ಚಂದ್ರಗ್ರಹಣ ಜಗತ್ತಿನ ಅದ್ಭುತ. ಇದು ರಕ್ತ ಚಂದಿರ ಅಲ್ಲ. ಅದ್ಭುತ ಚಂದಿರ. ಮಂಗಳ ಮತ್ತು ಅಮಂಗಳ ಎಂಬುದು ಇಲ್ಲ. ಜಗತ್ತಿನಲ್ಲಿ ಎಲ್ಲವೂ ಶುಭಕರ. ಬ್ರಿಟಿಷರ ದಾಸ್ಯದಿಂದ ಹೊರಗೆ ಬಂದ ನಾವು ಪಂಚಾಂಗದ ದಾಸ್ಯದಲ್ಲಿ ಜೀವಿಸುತ್ತಿದ್ದೇವೆ. ಮುಗ್ಧ ಜನರಿಗೆ ಹಾದಿ ತಪ್ಪಿಸುತ್ತಿರುವ ಕೆಲಸ ನಡೆಯುತ್ತಿದೆ. ಚಂದ್ರ ಗ್ರಹಣದ ಬಗ್ಗೆ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಈ ಮೂಲಕ ಜನರ ಭಯವನ್ನು ದೂರ ಮಾಡಬೇಕು ಎಂದು ತಿಳಿಸಿದರು.