ಬಂಟ್ವಾಳ, ಜು28: ತುಂಬೆ ವೆಂಟೆಡ್ ಡ್ಯಾಂ ನಿರ್ಮಾಣದಿಂದಾಗಿ ಕಳೆದ ಹಲವಾರು ವರ್ಷಗಳಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ಹಡೀಲು ಗದ್ದೆಯಲ್ಲಿ ಡ್ಯಾಂ ಸಂತ್ರಸ್ತ ರೈತರು ಅನೇಕ ಭಾರಿ ಕೃಷಿ ಕ್ರಾಂತಿ ನಡೆಸಿದ್ದರು. ಇದೀಗ ಮತ್ತೆ ಸಂತ್ರಸ್ತರು ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ.
ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ 6 ಮೀ. ನೀರು ಸಂಗ್ರಹಿಸಿ 6 ತಿಂಗಳಾದರೂ ಮುಳುಗಡೆ ಜಮೀನಿಗೆ ನೆಲಬಾಡಿಗೆ ಅಥವಾ ಶಾಶ್ವತ ಬಾಡಿಗೆ ನೀಡದಿರುವುದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ನಲ್ಲಿ ಹೂಡಲಾದ ದಾವೆಗೆ ಜು.10ರಂದು ಹೈಕೋರ್ಟ್ ಹೊರಡಿಸಿದ ತೀರ್ಪಿನಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ಥರ ಹೋರಾಟ ಸಮಿತಿ ಜಿಲ್ಲಾಧಿಕಾರಿ ಅವರನ್ನು ಮನವಿ ಮೂಲಕ ಒತ್ತಾಯಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕಾ ಅವರಿಗೂ ಕೂಡ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ರೈತ ಮುಖಂಡರಾದ ಮನೋಹರ ಶೆಟ್ಟಿ, ಸುದೇಶ್ ಮಯ್ಯಿ, ಅಬ್ದುಲ್ ರಹಿಮಾನ್, ರೋನಾಲ್ಡ್ ಡಿಸೋಜ ಮತ್ತಿತರರನ್ನೊಳಗೊಂಡ ನಿಯೋಗ ಮನವಿ ಸಲ್ಲಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದೆ.
ಸಾವಿರಾರು ಸಂತ್ರಸ್ತ ರೈತರ ಬೇಡಿಕೆಗಳನ್ನು ಮುಂದಿಟ್ಟು, ಸಂತ್ರಸ್ತರಿಗೆ ನ್ಯಾಯೋಚಿತ ಪರಿಹಾರ ವಿತರಿಸಬೇಕೆಂದು ರೈತ ಮುಖಂಡರು ಮನವಿ ಮೂಲಕ ಆಗ್ರಹಿಸಿದ್ದಾರೆ.