ಮಂಗಳೂರು, ಜು27: ನಗರದ ಪಾಂಡೇಶ್ವರ ಪೊಲೀಸ್ ಠಾಣೆ ಸಮೀಪವಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎರಡು ದನ ಮತ್ತು ಕರುವನ್ನು ಗೋ ಕಳ್ಳರು ಅಪಹರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದಾನವಾಗಿ ನೀಡಿದ್ದ 2 ದನ ಹಾಗು 1 ಕರುವನ್ನು ಜು.5ರಂದು ಗೋಕಳ್ಳರು ಅಪಹರಿಸಿದ್ದಾರೆ. ದೇವಸ್ಥಾನದಲ್ಲಿ ಸಾಕಲಾಗಿದ್ದ ಈ ದನದ ಹಾಲನ್ನು ದೇವರ ಅಭಿಷೇಕಕ್ಕೆ ಬಳಸಲಾಗುತ್ತಿತ್ತು. ಹಾಲನ್ನು ಕರೆದ ಬಳಿಕ ಮೇಯಲು ಬಿಟ್ಟಿದ್ದ ದನಗಳನ್ನು ಗೋಕಳ್ಳರು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಪಾಂಡೇಶ್ವರ ಪೊಲೀಸ್ ಠಾಣೆಯ ಪಕ್ಕದಲ್ಲೇ ಮಹಾಲಿಂಗೇಶ್ವರ ದೇವಸ್ಥಾನವಿದೆ. ಅಪರಿಚಿತ ದುಷ್ಕರ್ಮಿಗಳಿಬ್ಬರು ದೇವಸ್ಥಾನದ ಸಿಬ್ಬಂದಿಯನ್ನು ಬೆದರಿಸಿ ಬಲತ್ಕಾರವಾಗಿ ದನ ಮತ್ತು ಕರುಗಳನ್ನು ಕಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜು.5 ರಂದು ನಡೆದಿರುವ ಈ ಘಟನೆಯ ಕುರಿತು ದೇವಾಲಯದ ಸಿಬ್ಬಂದಿ ಜು.25ರಂದು ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.