ಮಂಗಳೂರು, ಜು 27: ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆ ಪಾಲಾಗಿದ್ದ ಮನೆಯೊಂದನ್ನು ಕೆಡಹುವ ಸಂದರ್ಭದಲ್ಲಿ ಮನೆಯ ಬೀಮ್ ಕಾರ್ಮಿಕರ ಮೈಮೇಲೆ ಬಿದ್ದು ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನ ಹೊರವಲಯದ ಪಡೀಲ್ ಬಜಾಲ್ನಲ್ಲಿ ಜು.27 ರ ಶುಕ್ರವಾರ ನಡೆದಿದೆ.
ಸುಮಾರು ಐವರು ಕಾರ್ಮಿಕರು ಇಲ್ಲಿ ಹಳೇ ಕಾಲದ ಕಲ್ಲಿನಿಂದ ಕಟ್ಟಿದ ಮನೆಯನ್ನು ಕೆಡಹುತ್ತಿದ್ದರು. ಈ ಸಂದರ್ಭ ಮೂವರು ಒಂದೇ ಜಾಗದಲ್ಲಿ ಕೆಲಸ ಮಾಡುವ ವೇಳೆ ಮನೆಯ ಬೀಮ್ ಇವರ ಮೈಮೇಲೆ ಬಿದ್ದಿದೆ. ಪರಿಣಾಮ ಮೂವರು ಕಟ್ಟಡದ ಕೆಳಕ್ಕೆ ಬಿದ್ದು ಗಂಭೀರಗೊಂಡಿದ್ದಾರೆ. ಇವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಮನೆ ಕೆಡವಲು ನಗರ ಪಾಲಿಕೆಗೆ ಸಂಬಂಧಿಸಿದ ಗುತ್ತಿಗೆದಾರರು ಇದನ್ನು ವಹಿಸಿಕೊಂಡಿದ್ದು ಗುತ್ತಿಗೆದಾರರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.