ಮಂಗಳೂರು, ಸೆ 30: ಮಂಗಳೂರು ದಸರಾ ಸಂಭ್ರಮದ ಗೌಜಿ ಗಮ್ಮತ್ತಿನ ನಡುವೆ ಪಿಲಿಪಜ್ಜೆ ಅನ್ನೋ ವಿಶೀಷ್ಟ ಶೈಲಿಯ ಕಾರ್ಯಕ್ರಮ ನಡದಿದ್ದು, ಕರಾವಳಿಯಲ್ಲಿ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದೆ. ನಗರದ ಮೋರ್ಗನ್ಸ್ ಗೇಟ್ ಕಲ್ಯಾಣೋತ್ಸವ ಮೈದಾನದಲ್ಲಿ ನಡೆದಿರುವ ಪಿಲಿಪಜ್ಜೆ ಕಾರ್ಯಕ್ರಮವು, ಮಂಗಳೂರು ದಸರಾದ ರಂಗನ್ನು ಮತ್ತಷ್ಟೂ ಹೆಚ್ಚಿಸಿದೆ.
ಕಳೆದ 24 ವರುಷಗಳಿಂದ ಕಲ್ಯಾಣೋತ್ಸವ ಮೈದಾನದಲ್ಲಿ ಜೆಪ್ಪು ಫ್ರೆಂಡ್ಸ್ ಕರಾವಳಿಯ ಜನಪದ ಕಲೆ ಹುಲಿವೇಷಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೇರೆ ಬೇರೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ಈ ಬಾರಿ 25 ನೇ ವರುಷದ ಸಂಭ್ರದಲ್ಲಿದ್ದ ತಂಡ, ವಿನೂತನ ರೀತಿಯ ಪಿಲಿಪಜ್ಜೆ ಕಾರ್ಯಕ್ರಮವನ್ನುನಡೆಸಿದೆ. ವೈಷ್ಣವಿ ಚಿನ್ನು ಗೆಳೆಯರ ಬಳಗದ ಸಹಯೋಗದೊಂದಿಗೆ ನಡೆದ ಬೃಹತ್ ಹುಲಿ ಕುಣಿತದ ಪಿಲಿಪಜ್ಜೆ ಕಾರ್ಯಕ್ರಮಕ್ಕೆ ಅದ್ಭುತ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಈ ಕಾರ್ಯಕ್ರಮ ಸಾವಿರಾರು ಜನರ ಮನಸೂರೆಗೊಳಿಸಿದೆ.
ರಾಜೇಶ್ ಪ್ರಭು ರೂವಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹುಲಿವೇಷಧಾರಿಗಳು ತಾಸೆಯ ಸದ್ದಿಗೆ ಅಬ್ಬರದ ಹೆಜ್ಜೆಗಾರಿಕೆಯ ಪ್ರದರ್ಶನ ಮಾಡಿದ್ದಾರೆ. ವಿಶೇಷವೆಂದರೆ ಬೇರೆ ಬೇರೆ ಧರ್ಮದ ಜನರು ಪಿಲಿಪಜ್ಜೆ ಕಾರ್ಯಕ್ರಮದಲ್ಲಿ ಪಾಲು ಪಡೆದಿದ್ದು, ಹುಲಿವೇಷದ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ.
ಮೈ ನವಿರೇಳುವ ಈ ಪಿಲಿಪಜ್ಜೆ ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ಪ್ರತಿಷ್ಠೆ ಪಡೆದ ಅನೇಕ ಹುಲಿವೇಷದ ತಂಡಗಳು ಭಾಗವಹಿಸಿದ್ದು ಪ್ರೇಕ್ಷಕರಿಗೆ ರಸದೌತಣವನ್ನು ನೀಡಿದೆ. ಈ ಪಿಲಿಪಜ್ಜೆ ಸ್ಪರ್ಧೆಯಲ್ಲಿ ಎಮ್ಮೆಕರೆ ಫ್ರೆಂಡ್ಸ್ ಸರ್ಕಲ್ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡರೆ, ದ್ವಿತೀಯ ಸ್ಥಾನವನ್ನು ಶ್ರೀ ಮಾರುತಿ ವ್ಯಾಯಾಮ ಶಾಲೆ ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ರಾಜಲಕ್ಷ್ಮಿ ಹೊಯಿಗೆ ಬಜಾರ್ ತನ್ನದಾಗಿಸಿಕೊಂಡರೆ, ಉಳಿದಂತೆ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಿದ್ದಾರೆ.