ಕಾಸರಗೋಡು, ಜು 27: ಹಿರಿಯ ರಾಜಕಾರಣಿ , ಮಾಜಿ ಸಚಿವ ಹಾಗೂ ಮಂಜೇಶ್ವರ ಶಾಸಕ ಚೆರ್ಕಳಂ ಅಬ್ದುಲ್ಲ ವಿಧಿವಶರಾಗಿದ್ದಾರೆ.ಅವರಿಗೆ 76 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಎರಡು ವಾರಗಳಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆರ್ಕಳಂ ಅಬ್ದುಲ್ಲ ರವರನ್ನು ವೈದ್ಯರ ಸಲಹೆಯಂತೆ ನಿನ್ನೆ ತಡರಾತ್ರಿ ಮನೆಗೆ ಕರೆತರಲಾಗಿತ್ತು. ಇಂದು ಬೆಳಿಗ್ಗೆ 8.20 ರ ಸುಮಾರಿಗೆ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಇವರು ಮುಸ್ಲಿಂ ಲೀಗ್ ರಾಜ್ಯ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಐಕ್ಯರಂಗದ ಘಟಕ ಪಕ್ಷವಾದ ಮುಸ್ಲಿಂ ಲೀಗ್ ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ, ಇವರು 1987 ರಿಂದ2001 ರ ತನಕ ನಾಲ್ಕು ಬಾರಿ ಮಂಜೇಶ್ವರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2001 ರಲ್ಲಿ ಎ .ಕೆ ಆಂಟನಿ ಸಚಿವ ಸಂಪುಟದಲ್ಲಿ ಸ್ಥಳೀಯಾಡಳಿತ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಕಾಸರಗೋಡಿಯ ಚೆರ್ಕಳ ನಿವಾಸಿಯಾಗಿದ್ದ ಚೆರ್ಕಳಂ ಅಬ್ದುಲ್ಲ ರವರು 1987 ರಲ್ಲಿ ಬಿ ಜೆ ಪಿ ಯ ಎಚ್ . ಶಂಕರ ಆಳ್ವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾದರು. ಇದರಿಂದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಪಾಲಾಯಿತು. 1992 ರಲ್ಲಿ ಬಿಜೆಪಿಯ ಜನಪ್ರಿಯ ನಾಯಕರಾಗಿದ್ದ ಕೆ . ಜಿ ಮಾರಾರ್ ವಿರುದ್ಧ 1072 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಯು ಡಿ ಎಫ್ ನ್ನು ಮತ್ತೆ ಗೆಲುವಿನತ್ತ ತಂದರು.1996 ರಲ್ಲಿ ಬಿಜೆಪಿಯ ಸಿ .ಕೆ ಪದ್ಮನಾಭನ್ ರನ್ನು ಸೋಲಿಸಿ ಮೂರನೇ ಬಾರಿ ಆಯ್ಕೆಯಾದರು. 2001 ರಲ್ಲಿ ಬಿ ಜೆ ಪಿ ಯ ಸಿ ಕೆ . ಪದ್ಮನಾಭನ್ ರನ್ನು ಮತ್ತೆ ಸೋಲಿಸಿ ನಾಲ್ಕನೇ ಬಾರಿ ವಿಧಾನಸಭೆಗೆ ಪ್ರವೇಶಿದರು 2006 ರಲ್ಲಿ ಸಿ ಪಿ ಎಂ ನ ಸಿ . ಎಚ್ ಕುಞ೦ಬು ವಿರುದ್ಧ ಸೋಲು ಕಾಣುವಂತಾಯಿತು. ಪಕ್ಷದಲ್ಲಿನ ಆಂತರಿಕ ಕಲಹ ಚೆರ್ಕಳಂ ಅಬ್ದುಲ್ಲ ರ ಸೋಲಿಗೆ ಮುಳುವಾಯಿತೆನ್ನಬಹುದು, ಆದರೆ 2011 ರಲ್ಲಿ ಚುನಾವಣೆಗೆ ಸ್ಪರ್ಧಿಸದೆ ಪಿ . ಬಿ ಅಬ್ದುಲ್ ರಜಾಕ್ ರನ್ನು ಕಣಕ್ಕಿಳಿಸಲಾಯಿತು.ಆದರೆ ಪಕ್ಷದ ಏಳಿಗೆಗಾಗಿ ದುಡಿದ ಅವರು 2011 ರಲ್ಲಿ ಮಂಜೇಶ್ವರ ಕ್ಷೇತ್ರ ಮತ್ತೆ ಯು ಡಿ ಎಫ್ ಪಾಲಾಗುವಂತೆ ನೋಡಿಕೊಂಡರು. ಹಲವು ವರ್ಷಗಳ ಕಾಲ ಮುಸ್ಲಿಂ ಲೀಗ್ ಹಾಗೂ ಯು ಡಿ ಎಫ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ . ವಿಧಾನ ಸಭಾ ಅಧಿವೇಶನದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸುವ ಮೂಲಕ ಕನ್ನಡಿಗರ ಮನ ಗೆದ್ದರು. ವಿಧಾನಸಭೆಯಲ್ಲಿ ಕನ್ನಡಲ್ಲಿ ಪ್ರಮಾಣ ವಚನ ಮಾಡಿದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.